ಅನ್-ನಬ’

ಸೂರಃ ಅನ್-ನಬ’ | ಪವಿತ್ರ್ ಕುರ್‍ಆನ್ ನ 78 ನೆಯ ಸೂರಃ | ಇದರಲ್ಲಿ ಒಟ್ಟು 40 ಆಯತ್ ಗಳು ಇವೆ | ( ಅರಬಿ: سورة النبأ )

078 | ಸೂರಃ ಅನ್-ನಬ’ | ಆಯತ್ ಗಳು 40
078 | ಸೂರಃ ಅನ್-ನಬ’ | ಆಯತ್ ಗಳು 40

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುತ್ತೇನೆ)!

ಯಾವ ವಿಷಯದ ಕುರಿತು ಅವರು (ಮಕ್ಕಃ ಪಟ್ಟಣದ ಬಹುದೈವವಿಶ್ವಾಸಿಗಳು / ಕುರೈಶ್ ಜನಾಂಗದವರು) ಪರಸ್ಪರ ಚರ್ಚೆಯಲ್ಲಿ ತೊಡಗಿದ್ದಾರೆ? (ಪುನರುತ್ಥಾನದಿನ ಎಂಬ) ಆ ಮಹಾ ಸುದ್ಧಿಯ ಕುರಿತೇ ಅವರ ಚರ್ಚೆ? ಅದರ ಕುರಿತೇ ಅವರು ಪರಸ್ಪರ ವಿಭಿನ್ನ ಅಭಿಪ್ರಾಯ ತಾಳಿರುವುದು? [1-3]

ಹಾಗಲ್ಲ! ಅವರಿಗಿದೋ ತಿಳಿಯಲಿದೆ. ಬಹು ಬೇಗನೆ ಅವರು (ಆ ಮಹಾ ಸುದ್ಧಿಯ ಕುರಿತು) ತಿಳಿದುಕೊಳ್ಳಲಿದ್ದಾರೆ. [4-5]

ನಾವು ಭೂಮಿಯನ್ನು ಸವಿಸ್ತಾರಗೊಳಿಸಿ ವಾಸಯೋಗ್ಯವಾಗಿ ಮಾಡಲಿಲ್ಲವೇ? ಎತ್ತರದ ಪರ್ವತಗಳನ್ನು (ಭೂಮಿಯಲ್ಲಿ) ಮೊಳೆಗಳಂತೆ ನಾಟಿ ಬಿಡಲಿಲ್ಲವೇ? ಮತ್ತು ನಾವು ನಿಮ್ಮನ್ನು (ಗಂಡು – ಹೆಣ್ಣು ಎಂಬ) ಜೋಡಿಗಳಾಗಿ ಸೃಷ್ಟಿಸಲಿಲ್ಲವೇ? ನಿದ್ರೆಯನ್ನು ನಾವು ನಿಮ್ಮ ಪಾಲಿಗೆ ಆರಾಮದಾಯಕವನ್ನಾಗಿ ಮಾಡಿದ್ದೇವೆ. ಜೊತೆಗೇ ರಾತ್ರಿಯನ್ನು (ಎಲ್ಲವನ್ನೂ ಮುಚ್ಚಿ ಬಿಡುವ) ಹೊದಿಕೆಯಂತಾಗಿಸಿದ್ದೇವೆ. ಮತ್ತು ಹಗಲನ್ನು ನಿಮ್ಮ ಪಾಲಿಗೆ ಜೇವನೋಪಾಯದ ಸಿದ್ಧತೆಗಾಗಿ ನಿಯುಕ್ತಗೊಳಿಸಿದ್ದೇವೆ. ಮತ್ತು ನಿಮ್ಮ ಮೇಲ್ಭಾಗದಲ್ಲಿ ಸುಭದ್ರವಾದ ಏಳು (ಗಗನ ಛಾವಣಿಗಳನ್ನು) ನಿರ್ಮಿಸಿದ್ದೇವೆ. ಪ್ರಜ್ವಲಿಸುವ ಸೂರ್ಯನನ್ನೂ ಅಲ್ಲಿ ಇರಿಸಿದ್ದೇವೆ. ಮೋಡಗಳಿಂದ ಧಾರಾಕಾರವಾಗಿ ಮಳೆಯನ್ನು ಸುರಿಸಿದ್ದೇವೆ. ಅದರಿಂದ ದವಸಧಾನ್ಯವನ್ನೂ ಸಸ್ಯರಾಶಿಯನ್ನೂ ದಟ್ಟವಾದ ತೋಟಗಳನ್ನೂ ಬೆಳೆಯುವಂತೆ ಮಾಡಿದ್ದೇವೆ. [6-16]

(ನಿಮ್ಮ ಕರ್ಮಗಳಿಗೆ ತಕ್ಕ ಪ್ರತಿಫಲ ನೀಡಲಾಗುವ) ನಿರ್ಣಾಯಕ ದಿನದ ಸಮಯವನ್ನು ಅದಾಗಲೇ ಗೊತ್ತುಪಡಿಸಲಾಗಿದೆ. ಅಂದು ಕಹಳೆಯನ್ನು ಊದಲಾಗುವುದು ಮತ್ತು ನೀವೆಲ್ಲ ತಂಡೋಪತಂಡವಾಗಿ (ನಿಮ್ಮ ಸಮಾಧಿಗಳಿಂದ) ಎದ್ದು ಬರುವಿರಿ. ಆಕಾಶವು ಅಂದು ತೆರೆಯಲ್ಪಡುವುದು, ಆಗ ಅದು ಬಾಗಿಲುಗಳಿಂದ ತುಂಬಿ ಹೋಗುವುದು. ಬೃಹತ್ ಪರ್ವತಗಳು ಅಂದು (ತನ್ನ ಸ್ಥಾನದಿಂದ) ಸರಿಸಲ್ಪಡುವುವು; ಅಲ್ಲಿ ಪರ್ವತಗಳು ಇರಲೇ ಇಲ್ಲವೇ ಎಂಬಂತೆ ಭಾಸವಾಗುವುದು. [17-20]

ನಿಜವಾಗಿ, ನರಕವು ಹೊಂಚು ಹಾಕುತ್ತಲಿದೆ! ಅದುವೇ (ಅಲ್ಲಾಹನ ಆಜ್ಞೆಗಳನ್ನು) ಉಲ್ಲಂಘಿಸಿದವರಿಗೆ ಗೊತ್ತುಪಡಿಸಿದ ತಾಣವಾಗಿದೆ. ಅಂಥವರು ಅದರಲ್ಲಿ ಸದಾಕಾಲ ಬಿದ್ದುಕೊಂಡಿರುವರು! ಕುದಿಯುತ್ತಿರುವ ನೀರು ಮತ್ತು ಕೀವುಗಳಂತಹ (ಅಸಹ್ಯ ವಸ್ತುಗಳಲ್ಲದೆ) ಬೇರೆ ತಂಪು ಪದಾರ್ಥವಾಗಲಿ ಅಥವಾ ಕುಡಿಯಲು ಯೋಗ್ಯವಾದ ಯಾವುದೇ ವಸ್ತುವಾಗಲಿ ಅವರಿಗೆ ರುಚಿ ನೋಡಲೂ ಅದರಲ್ಲಿ ಸಿಗದು. (ಅಲ್ಲಾಹನ ಆಜ್ಞೆಗಳನ್ನು ಉಲ್ಲಂಘಿಸಿದವರಿಗೆ) ತಕ್ಕುದಾದ ಪ್ರತಿಫಲವಿದು! [21-26]

ಅಂತಹ ಅಕ್ರಮಿಗಳು ಲೆಕ್ಕಪತ್ರಗಳ (ಸಮರ್ಪಣೆಯ ದಿನದ) ನಿರೀಕ್ಷೆಯಲ್ಲೇ ಇದ್ದವರಲ್ಲ. ನಮ್ಮ “ಆಯತ್” (ಅರ್ಥಾತ್: ಅದ್ಭುತ ನಿದರ್ಶನ) ಗಳನ್ನು ಅವರು ಸುಳ್ಳೆಂದು ತಳ್ಳಿಹಾಕುತ್ತಿದ್ದರು. ಆದರೆ ನಾವು (ಅವರ ಎಲ್ಲ ಕೃತ್ಯಗಳನ್ನು) ಒಂದೊಂದಾಗಿ ದಾಖಲಿಸಿಟ್ಟಿದ್ದೇವೆ. (ಅಂದು ಅವರೊಡನೆ ಹೇಳಲಾಗುವುದು:) ಇದೀಗ ಸವಿಯಿರಿ; ಶಿಕ್ಷೆಯ ಕಾಠಿಣ್ಯವನ್ನಲ್ಲದೆ ಬೇರೇನನ್ನೂ ನಿಮ್ಮ ಪಾಲಿಗೆ ಹೆಚ್ಚಿಸುವಂತಿಲ್ಲ! [27-30]

(ದುಷ್ಕೃತ್ಯಗಳಿಂದ ತಮ್ಮನ್ನು ನಿಗ್ರಹಿಸಿಕೊಂಡ) ಧರ್ಮನಿಷ್ಠರಿಗೆ ಗೆಲುವು ಖಚಿತವಾಗಿದೆ. ಅಂಥವರಿಗಾಗಿ ಉದ್ಯಾನಗಳಿವೆ, ದ್ರಾಕ್ಷಿಗಳಿವೆ, ಸಮವಯಸ್ಕ ತರುಣಿಯರ ಸಾಂಗತ್ಯವಿದೆ, ತುಂಬಿ ತುಳುಕುವ ಪಾನಪಾತ್ರೆಗಳೂ ಇವೆ, ಅಲ್ಲಿ ನಿರರ್ಥಕ ಮಾತಾಗಲೀ ಅಥವಾ ಹುಸಿ ನುಡಿಯಾಗಲೀ ಅವರು ಕೇಳಿಸಿ ಕೊಳ್ಳಲಾರರು. ನಿಮ್ಮ ಪ್ರಭುವಿನ ಕಡೆಯಿಂದ (ನಿಮಗೆ ಸಿಗಲಿರುವ) ಸೂಕ್ತ ಪ್ರತಿಫಲವಿದು; (ಮಾತ್ರವಲ್ಲ, ಸಜ್ಜನರಿಗೆ) ಯಥೇಚ್ಛ ಬಹುಮಾನಗಳೂ ಇರುವುದು. [31-36]

ಭೂಮಿ-ಆಕಾಶಗಳು ಮತ್ತು ಅವೆರಡರ ಮಧ್ಯೆ ಏನೆಲ್ಲಾ ಇವೆಯೋ ಅವೆಲ್ಲವುಗಳ (ಏಕೈಕ ಒಡೆಯನೂ ಪರಿಪಾಲಕನೂ ಆದ ಅಲ್ಲಾಹನು) ಅತ್ಯಂತ ದಯಾಮಯನು! ಅವನೊಂದಿಗೆ ಮಾತನಾಡುವ ಸಾಮರ್ಥ್ಯವು ಯಾರಲ್ಲಿಯೂ ಇಲ್ಲ. (ಪುನರುತ್ಥಾನದ) ಆ ದಿನ ‘ಅರ್-ರೂಹ್’ (ಅರ್ಥಾತ್: ಜಿಬ್ರೀಲ್/ಗೇಬ್ರಿಯಲ್) ಮತ್ತು ಇತರ ‘ಮಲಕ್’ ಗಳು ಸಾಲು ಸಾಲಾಗಿ ನಿಲ್ಲುವರು. ಅತ್ಯಂತ ದಯಾಮಯನಾದ (ಅಲ್ಲಾಹ್ ನು) ಯಾರಿಗೆ ಅನುಮತಿ ನೀಡುವನೋ ಅವನ ಹೊರತು (ಆ ದಿನ) ಬೇರೆ ಯಾವೊಬ್ಬನೂ ಮಾತನಾಡಲಾರನು. ಮತ್ತು ಹಾಗೆ ಮಾತನಾಡುವಾತ ಸರಿಯಾದ ಮಾತನ್ನೇ ಹೇಳುವನು. ಅದು ಅನಿವಾರ್ಯವಾಗಿ ಬಂದೇ ತೀರುವ ದಿನ. ಆದ್ದರಿಂದ ಇಷ್ಟವಿದ್ದವನು ತನ್ನ ಒಡೆಯನ ಬಳಿ ಆಸರೆಯನ್ನು ಪಡೆದುಕೊಳ್ಳಲಿ. ಖಂಡಿತವಾಗಿಯೂ ಸನ್ನಿಹಿತವಾಗಿ ಬಿಟ್ಟಿರುವ ಶಿಕ್ಷೆಯ (ದಿನದ) ಕುರಿತು ನಾವು ನಿಮಗೆ ಮುನ್ನೆಚ್ಚರಿಕೆ ನೀಡಿದ್ದೇವೆ. ಅಂದು ಮನುಷ್ಯನು ತಾನು ಕೈಯಾರೆ ಸಂಪಾದಿಸಿ ಕಳಿಸಿದ್ದೆಲ್ಲವನ್ನೂ ಕಣ್ಣಾರೆ ಕಂಡುಕೊಳ್ಳುವನು. (ಪುನರುತ್ಥಾನ ದಿನವನ್ನು) ಧಿಕ್ಕರಿಸಿದವನು – ಅಕಟಕಟಾ! ನಾನು (ಮನುಷ್ಯನಾಗುವುದಕ್ಕಿಂತ) ಮಣ್ಣಾಗಿರುತ್ತಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು ಎಂದು ಗೋಳಿಡುವನು! [37-40]

Advertisements

3 thoughts on “ಅನ್-ನಬ’

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s