‘ಅಬಸ

ಸೂರಃ ‘ಅಬಸ | ಪವಿತ್ರ್ ಕುರ್‍ಆನ್ ನ 80 ನೆಯ ಸೂರಃ | ಇದರಲ್ಲಿ ಒಟ್ಟು 42 ಆಯತ್ ಗಳು ಇವೆ | ( ಅರಬಿ: سورة عبس )

080 | ಸೂರಃ 'ಅಬಸ | ಆಯತ್ ಗಳು 42
080 | ಸೂರಃ ‘ಅಬಸ | ಆಯತ್ ಗಳು 42

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುತ್ತೇನೆ)!

ತನ್ನ ಬಳಿಗೆ ಕುರುಡನೊಬ್ಬನು ಬಂದಾಗ (ಪ್ರವಾದಿ ಮುಹಮ್ಮದ್ ರು) ಸಿಡುಕು ಮೋರೆ ಮಾಡಿಕೊಂಡರು ಮತ್ತು ಮುಖ ತಿರುಚಿ ಕೊಂಡರು. [1-2]

(ಓ ಪೈಗಂಬರರೇ) ನಿಮಗೇನು ಗೊತ್ತು? ಪ್ರಾಯಶಃ ಆ ಕುರುಡ ವ್ಯಕ್ತಿಯು ತನ್ನನ್ನು ಸಂಸ್ಕರಿಸಿಕೊಳ್ಳಬಹುದು ಅಥವಾ (ನೀವು ಮಾಡುವ) ಉಪದೇಶವನ್ನು ಸ್ವೀಕರಿಸಲೂ ಬಹುದು; ಉಪದೇಶವು ಅವನ ಪಾಲಿಗೆ ಪ್ರಯೋಜನಕಾರಿ ಆಗಲೂ ಬಹುದು! ಯಾರು ತನಗೆ ತಾನೇ ಸ್ವಯಂ-ಸಂಪೂರ್ಣನು (ಎಂಬಂತೆ ವರ್ತಿಸಿ ಉಪದೇಶವನ್ನು ತಿರಸ್ಕರಿಸಿದನೋ) ಅವನ ಬಗ್ಗೆ ನೀವು ಕಾಳಜಿ ವಹಿಸುತ್ತಿರುವಿರಿ. ಅಂಥವನು ಸಂಸ್ಕರಣೆ ಹೊಂದದೇ ಹೋದರೂ ಅದರ ಹೊಣೆ ನಿಮ್ಮ ಮೇಲಿಲ್ಲ. ಯಾರು (ಅಲ್ಲಾಹ್ ನನ್ನು) ಭಯಪಟ್ಟು ನಿಮ್ಮ ಬಳಿಗೆ (ಉಪದೇಶ ಪಡೆಯುವುದಕ್ಕೆ) ಧಾವಿಸಿ ಬಂದನೋ ಅಂಥವನಿಂದ ನೀವು ವಿಮುಖರಾಗುತ್ತಿರುವಿರಿ. ಹಾಗಾಗಬಾರದು; ಈ “ಕುರ್‍ಆನ್” ಒಂದು ಬೋಧನೆ ಮಾತ್ರ. ಆದ್ದರಿಂದ ಇಷ್ಟವಿದ್ದವನು ಮಾತ್ರ ಅದರಿಂದ ಬೋಧನೆ ಸ್ವೀಕರಿಸಲಿ. ಅದು ಅತ್ಯಂತ ಆದರಪೂರ್ಣವಾದ, ಅತ್ಯುನ್ನತವಾದ, ಪರಿಶುದ್ಧವಾದ ಪುಸ್ತಕಗಳಲ್ಲಿ ಇದೆ! ಆದರಣೀಯರೂ ಅತಿ ಶ್ರೇಷ್ಠರೂ ಆದ ಬರಹಗಾರ (ಮಲಕ್ ಗಳ) ಕೈಯಲ್ಲಿದೆ! [3-16]

ಮನುಷ್ಯನು ಹಾಳಾಗಿ ಹೋದನು! (ಬೋಧನೆಯನ್ನು ಧಿಕ್ಕರಿಸಿದ) ಅವನು ಅದೆಷ್ಟು ಕೃತಘ್ನ! ಅವನನ್ನು ಯಾವ ವಸ್ತುವಿನಿಂದ ಸೃಷ್ಟಿಸಲಾಗಿದೆ (ಎಂದು ಅವಲೋಕಿಸಿಕೊಳ್ಳಲಿ). ಒಂದು ಹನಿ ವೀರ್ಯದಿಂದ ಅವನನ್ನು ಸೃಷ್ಟಿಸಲಾಗಿದೆ. ನಂತರ ಅವನ ವಿಧಿಯನ್ನು ನಿಗದಿಪಡಿಸಲಾಯಿತು. ನಂತರ ಅವನು (ಕ್ರಮಿಸ ಬೇಕಾದ) ಹಾದಿಯನ್ನು ಸುಗಮಗೊಳಿಸಲಾಯಿತು. ತರುವಾಯ (ಅಲ್ಲಾಹ್ ನು) ಅವನನ್ನು ಮೃತಗೊಳಿಸಿದನು; ಬಳಿಕ ಗೋರಿಯಲ್ಲಿರಿಸಿದನು. ಆಮೇಲೆ ತಾನಿಚ್ಚಿಸಿದಾಗ ಅವನನ್ನು ಪುನಹ ಎಬ್ಬಿಸಿ ನಿಲ್ಲಿಸಿವನು. [17-22]

ಖಂಡಿತ ಇಲ್ಲ! ಅಲ್ಲಾಹನು ಏನನ್ನು ಆಜ್ಞಾಪಿಸಿದ್ದನೋ ಮನುಷ್ಯನು ಅದನ್ನು ಪೂರ್ತಿಗೊಳಿಸಲಿಲ್ಲ. ಮನುಷ್ಯನು ತನ್ನ ಆಹಾರದ (ಉತ್ಪಾದನೆಯ) ಕಡೆಗೊಮ್ಮೆ ದೃಷ್ಟಿ ಹಾಯಿಸಲಿ! ನಾವು ಧಾರಾಳವಾಗಿ ಮಳೆಯನ್ನು ಸುರಿಸಿದೆವು; ನೆಲವನ್ನು (ಆಹಾರೋತ್ಪಾದನೆಯ ಅನುಕೂಲಕ್ಕಾಗಿ) ಬೇಕಾದ ರೀತಿಯಲ್ಲಿ ಸೀಳಿದೆವು. ಅದರಿಂದ ದವಸ-ಧಾನ್ಯ, ದ್ರಾಕ್ಷಿಹಣ್ಣು, ಕಾಯಿ-ಪಲ್ಲೆ, ಝೈತೂನ್ [ಅರ್ಥಾತ್: ಆಲಿವ್ ವೃಕ್ಷ] ಮತ್ತು ಖರ್ಜೂರದ ಮರಗಳು, ದಟ್ಟ ತೋಟಗಳು, ಹಣ್ಣು-ಹಂಪಲು ಮತ್ತು ಹುಲ್ಲು-ಮೇವುಗಳನ್ನು ನಿಮ್ಮ ಹಾಗೂ ನಿಮ್ಮ ಜಾನುವಾರುಗಳ ಪ್ರಯೋಜನಕ್ಕಾಗಿ ಬೆಳೆಸಿದೆವು. [23-32]

ಕಿವಿಗಡಚಿಕ್ಕುವ ಆರ್ಭಟವು ಸಂಭವಿಸಿ ಬಿಟ್ಟಾಗ, ಆ ದಿನ ಮನುಷ್ಯನು ತನ್ನ ಸಹೋದರನಿಂದಲೂ (ತಪ್ಪಿಸಿಕೊಂಡು) ದೂರ ಓಡಿ ಹೋಗುವನು; ತನ್ನ ತಂದೆ-ತಾಯಿಯರಿಂದಲೂ ದೂರ ಓಡಿ ಹೋಗುವನು; ತನ್ನ ಪತ್ನಿಯಿಂದಲೂ ತನ್ನ ಪುತ್ರರಿಂದಲೂ ಓಡಿ ಹೋಗುವನು. ಅವರಲ್ಲಿ ಪ್ರತಿಯೊಬ್ಬನೂ ಅಂದು ಸ್ವತಃ ತನ್ನದೇ ದುರವಸ್ಥೆಯ/ಪಾಡಿನ ಬಗ್ಗೆ ಚಿಂತಾಕ್ರಾಂತನಾಗಿರುವನು. [33-37]

ಆದರೆ ಕೆಲವು ಮುಖಗಳು ಅಂದು ಶೋಭಾಯಮಾನವಾಗಿರುವುವು; ನಗುನಗುತ್ತಾ ಹರ್ಷಿಸುತ್ತಿರುವುವು. ಇನ್ನು ಕೆಲವು ಮುಖಗಳು ಅಂದು ಧೂಳು ಹತ್ತಿದಂತಿದ್ದು, ಕತ್ತಲು ಕವಿದಂತೆ ಇರುವುವು. ಅವರೇ ನಮ್ಮ (ಬೋಧನೆಗಳನ್ನು) ತಿರಸ್ಕರಿಸಿದವರು; ದುಷ್ಕರ್ಮಿಗಳಾದ ಪಾಪಿಗಳು! [38-42]

Advertisements

One thought on “‘ಅಬಸ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s