ಅಲ್ ಮಾಇದಃ | سورة المائدة

تـرجمـة سـورة المـائدة من القـرآن الكريـم إلى اللغـة الكناديـة من قبـل المترجـم الخـادم / إقبـال صوفـي – الكــويت

* سهـل الفهــم من غيـر الرجـوع إلى كتـاب التفسيــر *

almaaidah_title

ಅಲ್ಲಾಹ್ ನ ಹೆಸರಿನೊಂದಿಗೆ, ಅವನು ತುಂಬಾ ಕರುಣೆ ತೋರುವವನೂ ಸದಾ ಕರುಣೆ ತೋರುತ್ತಲೇ ಇರುವವನೂ ಆಗಿರುವನು!

ಓ ಧರ್ಮವಿಶ್ವಾಸಿಗಳೇ, (ಅಲ್ಲಾಹ್ ನೊಂದಿಗೆ ಇರುವ ಎಲ್ಲ) ಕರಾರುಗಳನ್ನು ನೀವು ಸಂಪೂರ್ಣವಾಗಿ ಪಾಲಿಸುವವರಾಗಿರಿ. ಮುಂದೆ ವಿವರಿಸಲಾಗುವವುಗಳನ್ನು ಹೊರತುಪಡಿಸಿ ಚತುಷ್ಪಾದಿ ಪ್ರಾಣಿ ವರ್ಗಕ್ಕೆ ಸೇರಿದ ಸಾಧುಪ್ರಾಣಿಗಳನ್ನು [ಅರ್ಥಾತ್ ಕುರಿ, ದನ, ಎಮ್ಮೆ, ಒಂಟೆ, ಮೊಲ, ಜಿಂಕೆ ಮುಂತಾದ ಸಸ್ಯಾಹಾರಿ ಪ್ರಾಣಿಗಳನ್ನು] ನಿಮಗೆ (ಆಹಾರಕ್ಕಾಗಿ) ಅನುಮತಿಸಲಾಗಿದೆ. ಆದರೆ ನೀವು ಇಹ್ರಾಮ್ [ಅರ್ಥಾತ್ ಹಜ್ಜ್ ಅಥವಾ ಉಮ್ರಃ ನಿರ್ವಹಿಸುತ್ತಿರುವ] ಸ್ಥಿತಿಯಲ್ಲಿರುವಾಗ ಬೇಟೆಯಾಡುವುದನ್ನು ಧರ್ಮಬದ್ಧವೆಂದು ಬಗೆಯದಿರಿ. ಅಲ್ಲಾಹ್ ನು [ತನ್ನ ಉಪಾಸಕರಿಗೆ] ಖಂಡಿತವಾಗಿ ತಾನು ಬಯಸುವುದನ್ನು ಆದೇಶಿಸುತ್ತಾನೆ. {1}

ಓ ವಿಶ್ವಾಸಿಗಳೇ, ಅಲ್ಲಾಹ್ ನು ಗೊತ್ತುಪಡಿಸಿದ ಲಾಂಛನಗಳ ಪಾವಿತ್ರ್ಯವನ್ನು ಉಲ್ಲಂಘಿಸಬೇಡಿ. ಹಾಗೆಯೇ, ಪವಿತ್ರ [ದುಲ್-ಕಅದಃ, ದುಲ್-ಹಜ್ಜಃ, ಮುಹರ್ರಮ್ ಮತ್ತು ರಜಬ್ ಗಳ ಪೈಕಿ ಯಾವದೇ] ತಿಂಗಳಿಗೆ, ಮತ್ತು (ಕಅಬಃ ಭವನದತ್ತ ಒಯ್ಯಲಾಗುವ) ಬಲಿಮೃಗಗಳಿಗೆ, [ಅದರಲ್ಲೂ ವಿಶೇಷವಾಗಿ ಗುರುತು ಸಿಗುವಂತೆ] ಕೊರಳಪಟ್ಟಿ ಕಟ್ಟಿರುವ ಬಲಿಮೃಗಗಳಿಗೆ, ಮತ್ತು ತಮ್ಮೊಡೆಯನ ಅನುಗ್ರಹ ಸಂಪ್ರೀತಿಗಳನ್ನು ಬಯಸಿ ಪವಿತ್ರ (ಕಅಬಃ) ಭವನದೆಡೆಗೆ ಬರುವ ಯಾತ್ರಿಕರಿಗೆ ಕೂಡ ಅಗೌರವ ತೋರದಿರಿ. ಇನ್ನು [ಹಜ್ಜ್ ನಿರ್ವಹಿಸಿ ಇಹ್ರಾಮ್ ನ ನಿಬಂಧನೆಗಳಿಂದ] ಮುಕ್ತರಾಗಿದ್ದರೆ ಆಗ ನೀವು (ಆಹಾರಕ್ಕಾಗಿ) ಬೇಟೆಯಾಡಬಹುದು.

ಮಸ್ಜಿದ್ ಅಲ್-ಹರಾಮ್ ಪ್ರವೇಶಿಸದಂತೆ ನಿಮ್ಮನ್ನು ತಡೆದ ಒಂದು ಜನಾಂಗದೊಂದಿಗೆ [ಅರ್ಥಾತ್ ಕುರೈಷರೊಂದಿಗೆ] ಇರುವ ವೈರತ್ವವೂ (ಅವರ ಮೇಲೆ) ಅತಿಕ್ರಮವೆಸಗುವಂತೆ ನಿಮ್ಮನ್ನು ಪ್ರಚೋದಿಸಬಾರದು. ಒಳಿತು ಮತ್ತು ಧರ್ಮನಿಷ್ಠೆಯ ಕಾರ್ಯಗಳಲ್ಲಿ ನೀವು ಪರಸ್ಪರ ಸಹಕರಿಸುವವರಾಗಿರಿ ಆದರೆ ಪಾಪಕೃತ್ಯ ಮತ್ತು ಅನ್ಯಾಯದ ಕೆಲಸಗಳಲ್ಲಿ ನೀವು ಪರಸ್ಪರರ ಸಹಾಯಕ್ಕೆ ನಿಲ್ಲದಿರಿ. ಅಲ್ಲಾಹ್ ನ ಭಯಭಕ್ತಿ ಮೈಗೂಡಿಸಿಕೊಳ್ಳಿರಿ. ಖಂಡಿತ ಅಲ್ಲಾಹ್ ನು [ಅಕ್ರಮಿಗಳನ್ನು] ಕಟುವಾಗಿ ಶಿಕ್ಷಿಸುವವನಾಗಿರುವನು. {2}

ಸ್ವಯಂ ಸತ್ತ ಪ್ರಾಣಿ-ಪಕ್ಷಿಗಳು; (ಚೆಲ್ಲಿದ) ರಕ್ತ; ಹಂದಿ ಮಾಂಸ; ಅಲ್ಲಾಹ್ ನ ಹೊರತು ಬೇರೆಯವರ ಹೆಸರು ಉಚ್ಚರಿಸಲ್ಪಟ್ಟ ಪ್ರಾಣಿಗಳು; ಹಾಗೆಯೇ [ಕತ್ತು ಹಿಸುಕಿದಾಗ ಅಥವಾ ಇತರ ಕಾರಣಗಳಿಂದಾಗಿ] ಉಸಿರುಗಟ್ಟಿ ಸತ್ತವು; ಪೆಟ್ಟು ಬಿದ್ದ ಕಾರಣ ಸತ್ತವು; ಮೇಲಿನಿಂದ ಬಿದ್ದು ಸತ್ತವು; (ಇತರ ಪ್ರಾಣಿಗಳ) ಕೊಂಬಿನ ಇರಿತಕ್ಕೊಳಗಾಗಿ ಸತ್ತವು; ಕ್ರೂರ ಮೃಗಗಳು ತಿನ್ನಲು ಹಿಡಿದವು – ಆದರೆ ನೀವು [ಅವನ್ನು ಜೀವಂತ ಪಡೆದು ‘ಹಲಾಲ್’ ಮಾಡಲು] ದಿಬ್‍ಹ್ ಮಾಡಿದ್ದರ ಹೊರತು; ಪೂಜಾಸ್ಥಳಗಳ ಬಲಿಪೀಠಗಳಲ್ಲಿ ಕೊಯ್ಯಲ್ಪಟ್ಟು (ಅದೃಷ್ಟ ಪರೀಕ್ಷೆಗೆ ಉಪಯೋಗಿಸುವ) ಸೋಡ್ತಿಯ ಬಾಣಗಳ ಮೂಲಕ ವಿತರಿಸಲಾಗುವ (ಅದರ ಮಾಂಸ) – ಇವೆಲ್ಲವನ್ನು ನಿಮಗೆ ನಿಷೇಧಿಸಲಾಗಿದೆ; ಇವೆಲ್ಲವೂ ಧರ್ಮಬಾಹಿರ! ಇಂದು ಈ ಧರ್ಮಧಿಕ್ಕಾರಿ ಜನರು ನೀವು ಪಾಲಿಸುತ್ತಿರುವ ಧರ್ಮವನ್ನು (ಹತ್ತಿಕ್ಕುವ ವಿಷಯದಲ್ಲಿ) ಹತಾಶರಾಗಿ ಹೋಗಿರುವರು. ಆದ್ದರಿಂದ ಇನ್ನು ನೀವು [ಇಂತಹ ವಿಧಿಗಳನ್ನು ಪಾಲಿಸುವಾಗ] ಅವರನ್ನು ಭಯಪಡಬೇಡಿರಿ ಬದಲಾಗಿ ನನಗೆ ಭಯಭಕ್ತಿ ತೋರುವವರಾಗಿರಿ. ಈ ದಿನ ನಾನು [ನಿಮಗೆ ಹಂತಹಂತವಾಗಿ ನೀಡುತ್ತಿದ್ದ] ನಿಮ್ಮ ಈ ಧರ್ಮವನ್ನು ನಿಮಗಾಗಿ ಪರಿಪೂರ್ಣಗೊಳಿಸಿದ್ದೇನೆ, (ಆ ಮೂಲಕ) ನನ್ನ ಅನುಗ್ರಹಗಳನ್ನು ನಿಮಗೆ ಪೂರ್ತೀಕರಿಸಿದ್ದೇನೆ, ಅಂದರೆ ‘ಇಸ್ಲಾಮ್’ ಅನ್ನು ನಿಮಗೆ ಧರ್ಮವಾಗಿ ಮೆಚ್ಚಿಕೊಂಡಿದ್ದೇನೆ! ಇನ್ನು, ಒಬ್ಬಾತನು ಹಸಿವಿನಿಂದ ಕಂಗಾಲಾಗಿದ್ದು [ಅಲ್ಲಾಹ್ ನ ಈ ನಿಯಮಗಳ] ಉಲ್ಲಂಘನೆಯ ಇರಾದೆ ಹೊಂದಿರದೆ [ಅವುಗಳಿಂದ ಏನನ್ನಾದರೂ ಸ್ವಲ್ಪ ತಿಂದುಬಿಟ್ಟರೆ] ಖಂಡಿತ ಅಲ್ಲಾಹ್ ನು ಕ್ಷಮಿಸುವವನೂ ಬಹಳವಾಗಿ ಕರುಣೆತೋರುವವನೂ ಆಗಿರುವನು. {3}

ತಮಗೆ ಯಾವುದನ್ನೆಲ್ಲ ‘ಹಲಾಲ್’ [ಅರ್ಥಾತ್ ತಿನ್ನಲು ಅನುಮತಿಸಿದವು] ಎಂದು ಪರಿಗಣಿಸಲಾಗಿದೆ ಎಂದು (ಓ ಪೈಗಂಬರರೇ) ಜನರು ನಿಮ್ಮೊಂದಿಗೆ ವಿಚಾರಿಸುತ್ತಿದ್ದಾರೆ. ಎಲ್ಲ ನಿರ್ಮಲ ವಸ್ತುಗಳನ್ನು (ಆಹಾರವಾಗಿ) ನಿಮಗೆ ಅನುಮತಿಸಲಾಗಿದೆ ಎಂದು ನೀವು ಅವರೊಂದಿಗೆ ಹೇಳಿ. ಅಲ್ಲಾಹ್ ನು ನಿಮಗೆ ನೀಡಿರುವ [ಪ್ರಾಣಿಪಕ್ಷಿಗಳನ್ನು ಪಳಗಿಸುವಂತಹ] ಜ್ಞಾನವನ್ನು ಬಳಸಿ ಆ ಪ್ರಕಾರ ನೀವು ಬೇಟೆಮೃಗಗಳಿಗೆ ಬೇಟೆಯ ತರಬೇತಿ ನೀಡಿದಾಗ ಅಂತಹ ಬೇಟೆಮೃಗಗಳು ನಿಮಗಾಗಿ ಹಿಡಿದಿಟ್ಟ ಬೇಟೆಯನ್ನು ಸಹ ನೀವು ತಿನ್ನಬಹುದು. ಆದರೆ (ಶಿಕಾರಿಗೆ ಬಿಡುವ ಮುನ್ನ) ನೀವು ಅವುಗಳ ಮೇಲೆ ಅಲ್ಲಾಹ್ ನ ಹೆಸರು ಉಚ್ಚರಿಸಬೇಕು. ಅಲ್ಲಾಹ್ ನು [ಆದೇಶಿಸಿದ ವಿಧಿ-ನಿಷೇಧಗಳ ಉಲ್ಲಂಘನೆಯಾಗದಂತೆ] ನೀವು ಎಚ್ಚರ ವಹಿಸಿಕೊಳ್ಳಿ. (ಏಕೆಂದರೆ) ಖಂಡಿತವಾಗಿ ಅಲ್ಲಾಹ್ ನು ಅತ್ಯಂತ ಶೀಘ್ರಗತಿಯಲ್ಲಿ ಲೆಕ್ಕ ಮುಗಿಸುವವನಾಗಿದ್ದಾನೆ. {4}

ಈ ದಿನ ಎಲ್ಲ ನಿರ್ಮಲವಾದ (ಅನ್ನಾಹಾರವನ್ನು) ನಿಮಗೆ ಅನುಮತಿಸಲಾಗಿದೆ; ದಿವ್ಯಗ್ರಂಥವನ್ನು ಹೊಂದಿದ ಜನರ ಅನ್ನಾಹಾರವನ್ನೂ ನಿಮಗೆ ಅನುಮತಿಸಲಾಗಿದೆ; ಹಾಗೆಯೇ ನಿಮ್ಮ ಅನ್ನಾಹಾರವನ್ನು ಅವರಿಗೂ ಅನುಮತಿಸಲಾಗಿದೆ. ವಿಶ್ವಾಸಿನಿಯರ ಗುಂಪಿಗೆ ಸೇರಿದ ಸುಶೀಲೆಯರಾದ ಸ್ತ್ರೀಯರನ್ನೂ, ನಿಮಗಿಂತ ಹಿಂದೆ ದಿವ್ಯಗ್ರಂಥ ನೀಡಲ್ಪಟ್ಟ (ಜನಾಂಗಕ್ಕೆ ಸೇರಿದ) ಸುಶೀಲೆಯರನ್ನೂ, ಅವರಿಗೆ ಸಲ್ಲಬೇಕಾದ ವಧುದಕ್ಷಿಣೆಯನ್ನು ನೀವು ಅವರಿಗೆ ಪಾವತಿಸುವುದಾದರೆ (ಅವರನ್ನು ವರಿಸಿಕೊಳ್ಳಲು) ನಿಮಗೆ ಅನುಮತಿಸಲಾಗಿದೆ – ಆದರೆ ಅದು (ಪವಿತ್ರ ವಿವಾಹ) ಬಂಧನವಾಗಿರಬೇಕೇ ಹೊರತು ಅನೈತಿಕತೆ ಆಗಿರಬಾರದು; ಗುಪ್ತ ಲೈಂಗಿಕತೆಯೂ ಆಗಿರಬಾರದು. ಇನ್ನು ಯಾರಾದರೂ ಇಂತಹ ನಂಬುಗೆಯನ್ನು ತಿರಸ್ಕರಿಸಿದರೆ ಆತನ ಎಲ್ಲ ಸತ್ಕರ್ಮವು (ಪರಲೋಕದಲ್ಲಿ) ವ್ಯರ್ಥವಾಗಿ ಹೋಗುವುದು, ಮಾತ್ರವಲ್ಲ ಆತನು ಪರಲೋಕದಲ್ಲಿ ನಷ್ಟಕ್ಕೊಳಗಾದವರ ಸಾಲಿಗೆ ಸೇರಿರುತ್ತಾನೆ. {5}

ಓ ವಿಶ್ವಾಸಿಗಳೇ, ನೀವು ನಮಾಝ್ ನಿರ್ವಹಿಸುವ ಉದ್ದೇಶದಿಂದ ಎದ್ದು ನಿಂತರೆ ನಿಮ್ಮ ಮುಖಗಳನ್ನೂ ಮೊಣಕೈಗಂಟು ಸಮೇತ ಕೈಗಳನ್ನೂ ತೊಳೆಯಿರಿ. (ತೊಯ್ದ ಕೈಗಳಿಂದ) ತಲೆಗಳನ್ನು ಸವರಿಕೊಳ್ಳಿ. ಮತ್ತು ನಿಮ್ಮ ಪಾದಗಳನ್ನು ಹಿಮ್ಮಡಿಗಂಟು ಸಮೇತ (ತೊಳೆಯಿರಿ). ಆದರೆ ನೀವು (ಸಂಭೋಗಾನಂತರದ) ಅಶುದ್ಧ ಸ್ಥಿತಿಯಲ್ಲಿದ್ದರೆ ಚೆನ್ನಾಗಿ (ಮಿಂದು) ಶುಚಿತ್ವ ಪಡೆದುಕೊಳ್ಳಿ. ಇನ್ನು ನೀವು ಅನಾರೋಗ್ಯ ಪೀಡಿತರಾಗಿದ್ದರೆ, ಅಥವಾ ಯಾತ್ರೆಯಲ್ಲಿದ್ದರೆ, ಅಥವಾ ನಿಮ್ಮಲ್ಲಿ ಯಾರಾದರೂ ಶೌಚಾಲಯವನ್ನು ಉಪಯೋಗಿಸಿ ಬಂದವರಿದ್ದರೆ, ಅಥವಾ ಪತ್ನಿಯರೊಂದಿಗೆ ಸುದೀರ್ಘ-ಸ್ಪರ್ಷ ಸಂಭವಿಸಿದ್ದರೆ, ಅನಂತರ (ಸ್ನಾನ ಮಾಡಲು) ನೀರು ನಿಮಗೆ ಲಭ್ಯವಿರದಿದ್ದರೆ [ನಮಾಝ್ ನಿರ್ವಹಿಸುವ ಮುನ್ನ] ನೀವು ಸ್ವಚ್ಛವಾದ ನೆಲದ ಮೇಲೆ (ಕೈ ಸವರಿ) ನಿಮ್ಮ ಮುಖಗಳನ್ನೂ ಕೈಗಳನ್ನೂ ಸವರಿಕೊಳ್ಳುವ ಮೂಲಕ ‘ತಯಮ್ಮಮ್’ ಮಾಡಿಕೊಳ್ಳಿ. ನಿಮ್ಮ ಮೇಲೆ ಕಷ್ಟವನ್ನು ಹೇರಬೇಕೆಂಬುದು ಅಲ್ಲಾಹ್ ನು ಬಯಸುವುದಿಲ್ಲ; ಬದಲಾಗಿ ನೀವು ಕೃತಜ್ಞತಾಭಾವ ಇರುವವರಾಗಲೆಂದು ನಿಮ್ಮನ್ನು (ಅಂತರಂಗ-ಬಹಿರಂಗವಾಗಿ) ಶುದ್ಧವಾಗಿಡಲು ಮತ್ತು ನಿಮ್ಮ ಮೇಲೆ ಅವನ ಅನುಗ್ರಗಳನ್ನು ಸಂಪೂರ್ಣಗೊಳಿಸಲು ಬಯಸುತ್ತಾನೆ. {6}

ನಿಮ್ಮ ಮೇಲೆ ಅಲ್ಲಾಹ್ ನು ಮಾಡಿದ ಅನುಗ್ರಹಗಳನ್ನು ಸ್ಮರಿಸಿರಿ. ಹಾಗೆಯೇ, ನಾವಿದೋ [ನಿನ್ನ ಆದೇಶಗಳನ್ನು] ಆಲಿಸಿಕೊಂಡೆವು ಮತ್ತು ಅನುಸರಿಸುವವರಾದೆವು ಎಂದು ನೀವು ಹೇಳಿದ ಸಂದರ್ಭದಲ್ಲಿ ಅವನು ನಿಮ್ಮಿಂದ ಪಡಕೊಂಡ ಕರಾರನ್ನೂ (ನೆನಪಿಟ್ಟುಕೊಳ್ಳಿ)! ಅಲ್ಲಾಹ್ ನ (ಜೊತೆಗಿನ ಕರಾರು ಪಾಲಿಸುವ ಬಗ್ಗೆ) ನೀವು ಜಾಗರೂಕತೆ ವಹಿಸುವವರಾಗಿರಿ; ಅಲ್ಲಾಹ್ ನಾದರೋ ಹೃದಯಗಳೊಳಗೆ ಅಡಗಿರುವ ವಿಚಾರಗಳನ್ನೂ ಬಲ್ಲವನಾಗಿರುವನು. {7}

ಓ ವಿಶ್ವಾಸಿಗಳ ಸಮುದಾಯವೇ, ನೀವು ಅಲ್ಲಾಹ್ ನಿಗಾಗಿ [ಅರ್ಥಾತ್ ಅಲ್ಲಾಹ್ ನೊಂದಿಗಿರುವ ಕರಾರಿನ ಪಾಲನೆಗಾಗಿ] ಕಟಿಬದ್ಧರಾಗಿ ನಿಲ್ಲಿರಿ; ನ್ಯಾಯಬದ್ಧವಾಗಿ (ಅದರ) ಸಾಕ್ಷ್ಯವಹಿಸುವವರಾಗಿರಿ. ಒಂದು ಜನಾಂಗದೊಂದಿಗಿನ ಶತ್ರುತ್ವವೂ [ಅವರೊಂದಿಗೆ ವ್ಯವಹರಿಸುವಾಗ] ನ್ಯಾಯಪಾಲಿಸದಂತೆ ನಿಮ್ಮನ್ನು ಪ್ರಚೋದಿಸದಿರಲಿ. ನೀವು ಯಾವತ್ತೂ ನ್ಯಾಯ ಪಾಲಿಸುವವರಾಗಿರಿ; ಅದು ಧರ್ಮನಿಷ್ಠೆಗೆ ಹೆಚ್ಚು ನಿಕಟವಾದ ಧೋರಣೆ. ಅಲ್ಲಾಹ್ ನಿಗೆ ಭಯಭಕ್ತಿ ತೋರುತ್ತಲಿರಿ. ನೀವು ಏನೆಲ್ಲ ಮಾಡುತ್ತಿರುವಿರೋ ಆ ಕುರಿತು ಅಲ್ಲಾಹ್ ನಿಗೆ ನಿಖರವಾದ ಅರಿವಿರುತ್ತದೆ. {8}

ಧರ್ಮವಿಶ್ವಾಸಿಗಳಾಗಿದ್ದು ಸತ್ಕರ್ಮಗಳನ್ನು ಮಾಡುತ್ತಿರುವವರಿಗೆ ಅಲ್ಲಾಹ್ ನು ಕ್ಷಮಾದಾನ ಹಾಗೂ ಅತಿಮಹತ್ತರವಾದ ಪ್ರತಿಫಲದ ವಾಗ್ದಾನ ಮಾಡಿದ್ದಾನೆ. ಇನ್ನು ಯಾರು ಧಿಕ್ಕಾರದ ನಿಲುವು ತಾಳಿ ನಮ್ಮ ವಚನಗಳನ್ನು ಅಲ್ಲಗಳೆದರೋ ಅವರೇ ನರಕಕ್ಕೆ ಸಂಗಾತಿಗಳಾಗುವವರು! {9-10}

ಓ ವಿಶ್ವಾಸಿಗಳೇ, [ಆಕ್ರಮಣದ ಉದ್ದೇಶದಿಂದ] ನಿಮ್ಮತ್ತ ಕೈಚಾಚಲು ಒಂದು ಕೂಟವು ನಿರ್ಧರಿಸಿದ್ದಾಗ ಅಲ್ಲಾಹ್ ನು ನಿಮ್ಮ ಮೇಲೆ ಮಾಡಿದ ಅನುಗ್ರಹವನ್ನೂ (ಈಗ) ನೆನಪಿಸಿಕೊಳ್ಳಿ. ಅವರ ಕೈಗಳನ್ನು ಅವನು ನಿಮ್ಮಿಂದ ತಡೆದನು! ಆದ್ದರಿಂದ ನೀವು ಅಲ್ಲಾಹ್ ನ ಭಯಭಕ್ತಿ ಉಳ್ಳವರಾಗಿರಿ. ಅಲ್ಲಾಹ್ ನ ಮೇಲೆಯೇ ಆಗಿರಬೇಕು ವಿಶ್ವಾಸಿಗಳು (ಸಂಪೂರ್ಣವಾದ) ಭರವಸೆ ಇಡಬೇಕಾದುದು. {11}

ಹಾಗೆಯೇ ಇಸ್ರಾಈಲ್ ವಂಶಜರಿಂದಲೂ ಅಲ್ಲಾಹ್ ನು ದೃಢವಾದ ಕರಾರೊಂದನ್ನು ಪಡೆದುಕೊಂಡಿದ್ದನು. ತರುವಾಯ [ಅದನ್ನು ಕಾರ್ಯಗತಗೊಳಿಸಲು] ಅವರ ಪೈಕಿಯ ಹನ್ನೆರಡು ಮಂದಿಯನ್ನು ಮೇಲ್ವಿಚಾರಕರಾಗಿ ನಾವು ನಿಯೋಜಿಸಿಕೊಂಡೆವು; ಜೊತಗೆ (ಸಹಾಯಕ್ಕಾಗಿ) ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಅಲ್ಲಾಹ್ ನು ಹೇಳಿಯೂ ಇದ್ದನು! ಇನ್ನು ನಮಾಝ್ ಅನ್ನು ನೀವು ಸ್ಥಿರವಾಗಿ ಪಾಲಿಸುವವರಾದರೆ, ಝಕಾತ್ ಅನ್ನು ನೀವು ಪಾವತಿಸುತ್ತಲಿದ್ದರೆ, ನಾನು ಕಳುಹಿಸಿದ ದೂತರುಗಳನ್ನು ಒಪ್ಪಿಕೊಂಡು [ದೌತ್ಯ ನಿರ್ವಹಣಾ ಕರ್ಯದಲ್ಲಿ] ಅವರಿಗೆ ನೀವು ನೆರವು ಒದಗಿಸುತ್ತಲಿದ್ದರೆ, ಜೊತೆಗೆ [ನಿಮ್ಮ ಸಂಪತ್ತನ್ನು ಅಲ್ಲಾಹ್ ನ ಮಾರ್ಗದಲ್ಲಿ ವ್ಯಯಿಸುವ ಮೂಲಕ] ಅತ್ಯುತ್ತಮ ರೀತಿಯ ಸಾಲವನ್ನು ಅಲ್ಲಾಹ್ ನಿಗೆ ನೀವು ನೀಡುವವರಾದರೆ ಖಂಡಿತ ನಿಮ್ಮ ಲೋಪದೋಷಗಳನ್ನು ನಿಮ್ಮಿಂದ ನಾನು ನೀಗಿಸುವೆನು, ಮತ್ತು ಕೆಳಭಾಗದಲ್ಲಿ ಹೊನಲುಗಳು ಪ್ರವಹಿಸುತ್ತಲಿರುವ ಸ್ವರ್ಗೋದ್ಯಾನಗಳೊಳಗೆ ನಿಮ್ಮನ್ನು ಖಂಡಿತಾ ಸೇರಿಸಿಕೊಳ್ಳುವೆನು! ಆದರೆ ಅಂತಹ (ಕರಾರಿನ) ಬಳಿಕವೂ ನಿಮ್ಮ ಪೈಕಿಯ ಯಾರಾದರೂ (ಅದನ್ನು) ತಿರಸ್ಕರಿಸಿದರೆ ಆತನು ನೇರವಾದ ದಾರಿಯನ್ನು ತಪ್ಪಿದವನಾಗುವನು. {12}

ಅನಂತರ ತಮ್ಮನ್ನು ತೊಡಗಿಸಿಕೊಂಡಿದ್ದ ಕರಾರನ್ನು ಅವರು ಉಲ್ಲಂಘಿಸಿದ ಕಾರಣಕ್ಕಾಗಿ ನಾವು ಅವರನ್ನು ಶಪಿಸಿದೆವು ಮತ್ತು ಅವರ ಹೃದಯಗಳು ಕಠೋರವಾಗುವಂತೆ ಮಾಡಿದೆವು. [ತೋರಾ ಗ್ರಂಥದ] ದಿವ್ಯವಚನಗಳನ್ನು ಅದರ ವಾಸ್ತವಿಕ ಸನ್ನಿವೇಶದಿಂದ ಅವರು ತಿರುಚಿ ಬಿಟ್ಟಿದ್ದರು ಹಾಗೂ ಏನನ್ನು ಅವರಿಗೆ (ತೋರಾ ದಲ್ಲಿ) ಉಪದೇಶಿಸಲಾಗಿತ್ತೋ ಅದರ ದೊಡ್ಡದೊಂದು ಭಾಗವನ್ನೇ ಅವರು ನಿರ್ಲಕ್ಷಿಸಿ ಬಿಟ್ಟಿದ್ದರು. [ಆದ್ದರಿಂದ ಓ ಪೈಗಂಬರರೇ,] ಅವರ ಪೈಕಿಯ ಸ್ವಲ್ಪವೇ ಜನರ ಹೊರತು ಉಳಿದವರ ವಿಶ್ವಾಸಘಾತುಕತನದ ಕುರಿತಾದ ವಾರ್ತೆಗಳು ನಿಮಗೆ (ಇನ್ನು ಮುಂದೆಯೂ) ತಲುಪುತ್ತಲೇ ಇರುವುವು. ಆದರೆ (ಸದ್ಯ) ನೀವು ಅವರಿಗೆ ಕ್ಷಮೆ ನೀಡುತ್ತಲಿರಿ ಮತ್ತು ಅವರ (ತಪ್ಪುಗಳನ್ನೂ) ನೀವು ಅವಗಣಿಸುತ್ತಲಿರಿ. ನಿಜವಾಗಿ ಅಲ್ಲಾಹ್ ನು ಉತ್ತಮವಾಗಿ ವ್ಯವಹರಿಸುವವರನ್ನು ಇಷ್ಟಪಡುತ್ತಾನೆ. {13}

ಹಾಗೆಯೇ ‘ನಾವು ನಸಾರಾಗಳು’ [ಅರ್ಥಾತ್ ನಾವು ಕ್ರೈಸ್ತರು] ಎಂದು ವಾದಿಸಿಕೊಂಡವರಿಂದಲೂ ನಾವು (ಈ ಹಿಂದೆ) ಒಂದು ಪ್ರಬಲ ಕರಾರನ್ನು ಪೆಡೆದಿದ್ದೆವು. ಆದರೆ ಏನನ್ನು ಅವರಿಗೆ [ಇಂಜೀಲ್ ನಲ್ಲಿ] ಉಪದೇಶಿಸಲಾಗಿತ್ತೋ ಅದರ ದೊಡ್ಡದೊಂದು ಭಾಗವನ್ನು ಅವರೂ ಸಹ ನಿರ್ಲಕ್ಷಿಸಿ ಬಿಟ್ಟರು. ಅದಕ್ಕೆ (ಶಿಕ್ಷೆಯಾಗಿ) ಅವರುಗಳು ತಮ್ಮೊಳಗೆ ಅಂತ್ಯದಿನದ ವರೆಗೂ ಹಗೆತನ ಮತ್ತು ದ್ವೇಷಸಾಧನೆಗಾಗಿ (ಪರಸ್ಪರ) ಪ್ರಚೋದಿತರಾಗುವಂತೆ ನಾವು ಮಾಡಿರುವೆವು. ಹೌದು, (ಭೂಮಿಯಲ್ಲಿ) ಅವರು ಎಸಗುತ್ತಿದ್ದ ಕೃತ್ಯಗಳೇನೆಂದು ಅಲ್ಲಾಹ್ ನು ಬಹುಬೇಗನೇ ಅವರಿಗೆ ತಿಳಿಸಿ ಕೊಡಲಿರುವನು. {14}

ಗ್ರಂಥವನ್ನು ಹೊಂದಿರುವ [ಅರ್ಥಾತ್ ಯಹೂದಿ ಮತ್ತು ನಸಾರಾ ಗಳಾದ] ಓ ಜನರೇ, ಧರ್ಮಸಂಹಿತೆಯಿಂದ ನೀವು ಬಚ್ಚಿಟ್ಟಿರುವಂತಹ ಹಲವು ವಿಷಯಗಳನ್ನು ನಿಮಗೆ ವಿವರಿಸುವವರಾಗಿಯೂ ನಿಮ್ಮ ಹಲವು [ಅಪರಾಧಗಳನ್ನು ಅವಗಣಿಸಿ] ನಿಮಗೆ ಕ್ಷಮೆ ನೀಡುವವರಾಗಿಯೂ ಇದೀಗ ನಮ್ಮ ದೂತರು [ಅರ್ಥಾತ್ ಮುಹಮ್ಮದ್ ಪೈಗಂಬರರು] ನಿಮ್ಮಲ್ಲಿಗೆ ಬಂದಿರುತ್ತಾರೆ. ಅಲ್ಲಾಹ್ ನ ವತಿಯಿಂದ ಇದೀಗ ನಿಮ್ಮ ಬಳಿಗೊಂದು ಪ್ರಕಾಶವೂ ಅತ್ಯಂತ ಸ್ಪಷ್ಟವಾದ [ಧಾರ್ಮಿಕ ವಿಧಿಗಳನ್ನೊಳಗೊಂಡ] ಒಂದು ಗ್ರಂಥವೂ ಬಂದಿರುತ್ತದೆ. ಅದರ ಮೂಲಕ ಅಲ್ಲಾಹ್ ನು ಅವನ ಸಂಪ್ರೀತಿಯನ್ನು ಅರಸುವವರಿಗೆ ಶಾಂತಿಸಮಾಧಾನ ಸುರಕ್ಷತೆಗಳೆಡೆಗೆ ಮಾರ್ಗದರ್ಶನ ನೀಡುತ್ತಾನೆ. ಅಂತಹವರನ್ನು ತನ್ನ ಅನುಮೋದನೆಯೊಂದಿಗೆ (ಅಧರ್ಮದ) ಅಂಧಕಾರದಿಂದ ಹೊರತೆಗೆದು (ಧಾರ್ಮಿಕತೆಯ) ಬೆಳಕಿನತ್ತ ಕೊಂಡೊಯ್ಯುತ್ತಾನೆ. ಅಂದರೆ ಅವರನ್ನು ನೇರವಾದ ಮಾರ್ಗದತ್ತ ಮುನ್ನಡೆಸುತ್ತಾನೆ. {15-16}

ಖಂಡಿತವಾಗಿಯೂ, ಮರ್ಯಮ್ ರ ಪುತ್ರನಾದ ಮಸೀಹನೇ ಆಗಿರುವನು ಅಲ್ಲಾಹ್ ನು ಎಂದು ಸಾರಿರುವವರು ನಿಜವಾಗಿ (ಸತ್ಯವನ್ನು) ತಿರಸ್ಕರಿಸಿದವರಾದರು. ಮರ್ಯಮ್ ರ ಪುತ್ರ ಮಸೀಹನನ್ನೂ ಅವರ ತಾಯಿಯನ್ನೂ ಭೂಮಿಯ ಮೇಲಿರುವ ಸರ್ವರನ್ನೂ ಒಂದು ವೇಳೆ ಅಲ್ಲಾಹ್ ನು ಅಳಿಸಿ ಹಾಕ ಬಯಸಿದರೆ ಅವನ (ಇಚ್ಛೆಯನ್ನು ತಡೆಯುವ) ಕಿಂಚಿತ್ ಸಾಮರ್ಥ್ಯವಾದರೂ ಯಾರಿಗಿದೆ – ಎಂದು [ಓ ಪೈಗಂಬರರೇ, ನೀವು ಅವರೊಂದಿಗೆ] ಕೇಳಿರಿ. ವಸ್ತುತಃ ಭೂಮಿ, ಆಕಾಶ ಮತ್ತು ಅವೆರಡರ ನಡುವೆ ಏನೆಲ್ಲ ಇವೆಯೋ ಅವೆಲ್ಲದರ ಆಧಿಪತ್ಯ ಅಲ್ಲಾಹ್ ನಿಗೆ ಮಾತ್ರ ಸಲ್ಲುತ್ತದೆ. ತಾನೇನು ಬಯಸುವನೋ ಅದನ್ನು ಅವನು ಸೃಷ್ಟಿಸುವನು. ಅಲ್ಲಾಹ್ ನು ಎಲ್ಲಾ ವಿಷಯಗಳಲ್ಲಿ ಅಪ್ರತಿಮ ಸಾಮರ್ಥ್ಯವುಳ್ಳವನು. {17}

ಆದರೂ ನಾವೇ ಅಲ್ಲಾಹ್ ನ ಸುಪುತ್ರರೂ ಅವನ ಪ್ರೀತಿಪಾತ್ರರೂ ಆಗಿರುವೆವು ಎಂದು ಈ ಯಹೂದ್ಯರೂ ಈ ಕ್ರೈಸ್ತರೂ ಸಾರಿದ್ದಾರೆ. ಅದು ಹೌದಾದರೆ ನಿಮ್ಮ ಪಾಪಗಳಿಗಾಗಿ ಅವನು ನಿಮ್ಮನ್ನು ಹಿಡಿದು ಶಿಕ್ಷಿಸುವುದೇಕೆ ಎಂದು (ಓ ಪೈಗಂಬರರೇ) ನೀವು ಕೇಳಿರಿ. ಹಾಗಲ್ಲ, ನೀವೂ (ಇತರೆಲ್ಲರಂತೆ) ಅವನು ಸೃಷ್ಟಿಸಿದ ಮನುಷ್ಯರು ಮಾತ್ರವೇ! ಅವನಾದರೋ ತಾನು ಕ್ಷಮಿಸಲಿಚ್ಛಿಸುವವರನ್ನು ಕ್ಷಮಿಸುವನು, ಹಾಗೆಯೇ ತಾನು ಶಿಕ್ಷಿಸಲಿಚ್ಛಿಸುವವರನ್ನು ಶಿಕ್ಷೆಗೆ ಗುರಿಪಡಿಸುವನು. ಮತ್ತು [ಅದು ಪ್ರಶ್ನಾತೀತ, ಏಕೆಂದರೆ] ಆಕಾಶಗಳು, ಭೂಮಿ ಹಾಗೂ ಅವುಗಳ ನಡುವಿನ (ಸಕಲ ಪ್ರಪಂಚದ) ಯಜಮಾನತ್ವವೆಲ್ಲ ಅವನದೇ; ಮತ್ತು (ನಿಮ್ಮೆಲ್ಲರ ಅಂತಿಮ) ಮರಳುವಿಕೆ ಸಹ ಅವನೆಡೆಗೇ ಆಗಿರುವುದು! {18}

ದಿವ್ಯಗ್ರಂಥವನ್ನು ಹೊಂದಿರುವ ಓ ಜನರೇ, ನಮ್ಮ ಬಳಿಗೆ (ಸ್ವರ್ಗದ ಕುರಿತು) ಸುವಾರ್ತೆ ನೀಡುವ ಮತ್ತು (ನರಕ ಶಿಕ್ಷೆಯ ಬಗ್ಗೆ) ಮುನ್ನೆಚ್ಚರಿಕೆ ನೀಡುವ ದೂತರು ಯಾರೂ ಬಂದೇ ಇಲ್ಲವೆಂದು ನೀವು ವಾದಿಸದಂತಾಗಲು ದೂತರುಗಳ ಅನುಪಸ್ಥಿತಿಯ ಒಂದು ದೀರ್ಘಾವಧಿಯ ನಂತರ ಇದೀಗ ನಿಮಗೆ (ಧರ್ಮವನ್ನು) ಚೆನ್ನಾಗಿ ವಿವರಿಸಿ ಕೊಡುವ ನಮ್ಮ ಈ ದೂತರು [ಅರ್ಥಾತ್ ಮುಹಮ್ಮದ್ ಪೈಗಂಬರರು] ನಿಮ್ಮ ಬಳಿಗೆ ಬಂದಿರುತ್ತಾರೆ! ಹೌದು, [ಇನ್ನು ನೀವು ಕುಂಟು ನೆಪವೊಡ್ಡುವಂತಿಲ್ಲ; ಏಕೆಂದರೆ ಧರ್ಮವನ್ನು ಅನುಸರಿಸುವವರಿಗೆ] ಶುಭವಾರ್ತೆ ಮತ್ತು [ಧಿಕ್ಕರಿಸುವವರಿಗೆ] ಮುನ್ನೆಚ್ಚರಿಕೆ ನೀಡುವ (ದೂತರೊಬ್ಬರು) ನಿಮ್ಮ ಬಳಿಗೆ ಬಂದಾಗಿದೆ. ಹೌದು! [ಇನ್ನು ಧಿಕ್ಕರಿಸಿದರೆ ಮುನ್ನೆಚರಿಕೆಯಂತೆ ನಿಮ್ಮನ್ನು ಶಿಕ್ಷಿಸಲಾಗುವುದು, ಏಕೆಂದರೆ] ಎಲ್ಲವನ್ನೂ ಮಾಡಿ ತೀರುವ ಸಾಮರ್ಥ್ಯ ಅಲ್ಲಾಹ್ ನಿಗೆ ಇದೆ! {19}

(ಗ್ರಂಥದವರೇ), ಪ್ರವಾದಿ ಮೂಸಾರು ತಮ್ಮ ಜನರೊಂದಿಗೆ – ಓ ನನ್ನ ಜನರೇ! ನಿಮ್ಮ ನಡುವೆ (ಸದಾ ಅಲ್ಲಾಹ್ ನ) ದೂತರುಗಳು ಉಪಸ್ಥಿತರಿರುವಂತೆ ಮಾಡಿ, ನಿಮ್ಮನ್ನು (ನಾಡಿನ) ಅಧಿಪತಿಗಳನ್ನಾಗಿಸಿ, ಲೋಕದ ಜನರಲ್ಲಿ ಬೇರಾವ ಜನತೆಗೂ ನೀಡಿರದಂತಹ [ಮಹತ್ತರ ಸ್ಥಾನವನ್ನು] ನಿಮಗೆ ನೀಡುವ ಮೂಲಕ ಅಲ್ಲಾಹ್ ನು ನಿಮಗೆ ದಯಪಾಲಿಸಿದ ಅನುಗ್ರಹಗಳನ್ನು ನೀವು ಸ್ಮರಿಸುವವರಾಗಿರಿ! ಓ ನನ್ನ ಜನರೇ, [ಇದೀಗ ನೀವು] ಅಲ್ಲಾಹ್ ನು ನಿಮಗಾಗಿ ಗೊತ್ತುಪಡಿಸಿದ ಆ ಪಾವನ [ಜೆರುಸೆಲೆಮ್] ನೆಲವನ್ನು ಪ್ರವೇಶಿಸಿಕೊಳ್ಳಿ; ಆದರೆ ನೀವು (ಅಂಜುಬುರುಕರಾಗಿ) ಬೆನ್ನು ತಿರುಗಿಸಿ ಮರಳ ಬಾರದು. ಹಾಗೇನಾದರೂ ಮಾಡಿದರೆ ನೀವು ನಷ್ಟಕ್ಕೊಳಗಾಗಿ ಮರಳುವಿರಿ – ಎಂದು ಹೇಳಿದ್ದ ಸಂದರ್ಭವನ್ನು ನೆನಪಿಸಿಕೊಳ್ಳಿ. {20-21}

ಓ ಮೂಸಾ! ಆ ನೆಲದಲ್ಲಿ ಜನಪೀಡಕ ಜನಾಂಗವೊಂದು ವಾಸವಿದೆ, ಅವರು ಅಲ್ಲಿಂದ ತೊಲಗುವ ತನಕ ನಾವು ಆ ನಾಡನ್ನು ಪ್ರವೇಶಿಸಿಕೊಳ್ಳುದು ಸಾಧ್ಯವೇ ಇಲ್ಲ. ಇನ್ನು ಅವರು ಅಲ್ಲಿಂದ ಹೊರಟು ಹೋದರೆ ನಾವು ಖಂಡಿತ ಪ್ರವೇಶಿಸುವೆವು – ಎಂದು (ಪ್ರವಾದಿ ಮೂಸಾ ರ ಜನಾಂಗದವರು) ಉತ್ತರಿಸಿದರು. {22}

ಆ ಅಂಜುಬುರುಕರ ನಡುವೆಯೇ ಇದ್ದ, ಆದರೆ ಅಲ್ಲಾಹ್ ನ ಅನುಗ್ರಹಕ್ಕೆ ಪಾತ್ರರಾಗಿದ್ದ ಇಬ್ಬರು – ನೀವು (ಆ ಪಟ್ಟಣದ) ಹೆಬ್ಬಾಗಿಲಿಂದಲೇ ಅವರ ಮೇಲೆರಗುತ್ತಾ ಒಳನುಗ್ಗಿರಿ; ಹಾಗೆ ಮಾಡಿದರೆ ಅದರೊಳಗೆ ಪ್ರವೇಶಿಸಿದ ಕೂಡಲೇ ಮೇಲುಗೈ ನಿಮಗೇ ಸಿದ್ಧಿಸುವುದು; ಇನ್ನು ನೀವು ವಿಶ್ವಾಸಿಗಳು ಹೌದಾದರೆ ನೀವು ಭರವಸೆ ಇಡಬೇಕಾದುದು ಅಲ್ಲಾಹ್ ನ ಮೇಲೆ ಮಾತ್ರವಾಗಿರಬೇಕು – ಎಂದು ಉಪದೇಶಿಸಿದರು! {23}

[ಪ್ರವಾದಿ ಮೂಸಾ ರ ಜನಾಂಗದವರು ಪುನಃ] ಓ ಮೂಸಾ! ಆ ನಾಡಿನಲ್ಲಿ ಅವರು ತಂಗಿರುವ ತನಕ ನಾವು ಅದನ್ನು ಪ್ರವೇಶಿಸುವುದು ಸಾಧ್ಯವೇ ಇಲ್ಲ. ಆದ್ದರಿಂದ ನೀವು ಮತ್ತು ನಿಮ್ಮ ದೇವರು ಹೋಗಿರಿ ಮತ್ತು (ಅವರೊಂದಿಗೆ) ಯುದ್ಧವನ್ನೂ ನೀವೇ ಮಾಡಿರಿ. [ಅದುವರೆಗೂ] ನಾವು ಇಲ್ಲೇ ಕುಳಿತಿರುವೆವು – ಎಂದು ಹೇಳಿದರು. {24}

[ತಮ್ಮ ಸಮುದಾಯದ ನಿರಂತರವಾದ ಇಂತಹ ನಡವಳಿಕೆಯಿಂದ ಬೇಸತ್ತು ಹೋದ ಪ್ರವಾದಿ ಮೂಸಾ ರು,] ಒಡೆಯಾ! ಸ್ವತಃ ನನ್ನ ಮತ್ತು ನನ್ನ ಸಹೋದರ [ಹಾರೂನ್] ನ ಹೊರತು (ಬೇರ ಯಾರ) ಮೇಲೂ ನಾನು ಯಾವ ನಿಯಂತ್ರಣಾಧಿಕಾರವನ್ನೂ ಹೊಂದಿರುವುದಿಲ್ಲ; ಆದ್ದರಿಂದ ಈಗ ನಮ್ಮನ್ನು ಈ ಅವಿಧೇಯ ಜನರಿಂದ ಬೇರ್ಪಡಿಸಿ ದೂರೀಕರಿಸು – ಎಂದು (ಕೊನೆಯದಾಗಿ) ಪ್ರಾರ್ಥಿಸಿಕೊಂಡರು. {25}

ಕೂಡಲೇ, ಆ ಭೂಭಾಗವು (ಮುಂದಿನ) ನಲ್ವತ್ತು ವರ್ಷಗಳ ಕಾಲ (ವಾಸ್ತವ್ಯಕ್ಕಾಗಿ) ಇವರ ಪಾಲಿಗೆ ನಿಷೇಧಿಸಲ್ಪಟ್ಟಿರುತ್ತದೆ; (ಮಾತ್ರವಲ್ಲ) ಇವರು ಭೂಮುಖದ ಮೇಲೆ ದಿಕ್ಕೆಟ್ಟು ಅಲೆಯಲಿರುವರು. ಹಾಗಿರುವಾಗ [ನಿರಂತರ ಆಜ್ಞೋಲ್ಲಂಘನೆ ನಡೆಸಿದ] ಆ ಅವಿಧೇಯ ಜನರಿಗಾಗಿ ನೀವು ಇನ್ನು ಚಿಂತಿತರಾಗದಿರಿ – ಎಂದು [ಅಲ್ಲಾಹ್ ನು] ಆದೇಶಿಸಿದನು. {26}

[ಪೈಗಂಬರರೇ, ನಿಮ್ಮೊಂದಿಗೂ ಹಗೆತನ-ಮತ್ಸರದ ಎಲ್ಲ ಮೇರೆಗಳನ್ನು ಮೀರಿದ] ಇವರಿಗೆ (ಪ್ರವಾದಿ) ಆದಮ್ ರ ಇಬ್ಬರು ಪುತ್ರರಿಗೆ ಸಂಬಂಧಿಸಿದಂತೆ ನಿಜ ಸಂಗತಿಯನ್ನು ಈಗ ತಿಳಿಸಿಕೊಡಿ. ಅವರಿಬ್ಬರೂ ಒಂದೊಂದು ಬಲಿಯರ್ಪಣೆ ಮಾಡಿದ ಸಂದರ್ಭದಲ್ಲಿ ಒಬ್ಬನಿಂದ ಮಾತ್ರ ಅದು ಸ್ವೀಕೃತಗೊಂಡಿತು ಆದರೆ ಇನ್ನೊಬ್ಬನ (ಬಲಿಯರ್ಪಣೆ ಅಲ್ಲಾಹ್ ನ ಸನ್ನಿಧಿಯಲ್ಲಿ) ಸ್ವೀಕರಿಸಲ್ಪಡದೇ ಹೋಯಿತು. ಆಗ [ಮತ್ಸರಗೊಂಡ] ಅವನು ನಾನು ಖಂಡಿತಾ ನಿನ್ನನ್ನು ವಧಿಸುವೆನು – ಎಂದು ಹೇಳಿದನು. (ಅದಕ್ಕುತ್ತರವಾಗಿ) ಅಲ್ಲಾಹ್ ನಾದರೋ ಭಕ್ತ ಜನರಿಂದ ಮಾತ್ರವೇ (ಉಪಾಸನೆಗಳನ್ನು) ಸ್ವೀಕರಿಸುವನು; ಇನ್ನು ನೀನು ನನ್ನನ್ನು ವಧಿಸಲು ನನ್ನ ಮೇಲೆ ಕೈ ಎತ್ತಿದರೂ ನಿನ್ನನ್ನು ವಧಿಸಲು ನಾನಂತು ನಿನ್ನತ್ತ ಕೈ ಚಾಚಲಾರೆ, (ಏಕೆಂದರೆ) ಸಕಲ ಲೋಕಗಳ ಪರಿಪಾಲಕನಾದ ಅಲ್ಲಾಹ್ ನಿಗೆ ನಾನು ಭಯಪಡುತ್ತೇನೆ. ನಾನು ಉದ್ದೇಶಿಸುವುದು ನನ್ನ [ಅರ್ಥಾತ್ ಆತ್ಮರಕ್ಷಣೆಗೆ ಪ್ರಯತ್ನಿಸುವಾಗ ನನ್ನಿಂದ ಸಂಭವಿಸಬಹುದಾದ] ಪ್ರಮಾದ ಹಾಗೂ ನಿನ್ನೆಲ್ಲ ಪಾಪಗಳ ಹೊರೆಯನ್ನು ನೀನೇ ಹೊತ್ತು ನರಕವಾಸಿಗಳ ಸಾಲಿಗೆ ನೀನು ಸೇರಬೇಕೆಂದಾಗಿದೆ. ದುಷ್ಕರ್ಮಿಗಳಿಗೆ ತಕ್ಕ ಶಾಸ್ತಿ ಅದೇ ಆಗಿರುವುದು – ಎಂದು (ಯಾರ ಬಲಿಯು ಸ್ವೀಕೃತವಾಗಿತ್ತೋ) ಅವನು ಉತ್ತರಿಸಿದನು! {27-29}

ಹಾಗಿರುವಾಗ, ತನ್ನ ಸಹೋದರನನ್ನು ಕೊಲೆಗೈಯುವಂತೆ ಆತನ ಚಿತ್ತವು ಆತನನ್ನು ಪ್ರಚೋದಿಸಿತು. ಕೊನೆಗೆ ಆತನು ಅವನನ್ನು ಕೊಂದು ಬಿಟ್ಟನು ಮತ್ತು ಎಲ್ಲವನ್ನು ಕಳೆದುಕೊಂಡವರ ಯಾದಿಗೆ ಸೇರಿ ಹೋದನು. ತರುವಾಯ, ತನ್ನ ಸಹೋದರನ ಮೃತದೇಹವನ್ನು ಮರೆಮಾಚುವ ಪರಿ ಹೇಗೆಂದು ತೋಚದ ಆತನಿಗೆ ತೋರಿಸಿಕೊಡಲೆಂದು ನೆಲದಲ್ಲಿ (ಗುಂಡಿ) ತೋಡುವ ಕಾಗೆಯೊಂದನ್ನು ಅಲ್ಲಾಹ್ ನು (ಅಲ್ಲಿಗೆ) ಕಳುಹಿಸಿದನು. [ಶವವನ್ನು ನೆಲದಲ್ಲಿ ಹೂಳಬಹುದು ಎಂಬ ವಾಸ್ತವಿಕತೆಯನ್ನು ಅದರಿಂದ ಕಲಿಯಬೇಕಾದ ಪರಿಸ್ಥಿತಿ ಬಂದಾಗ] ಆತನು, ಅಕಟಾ, ಓ ನನ್ನ ದುರ್ದೈವವೇ! ಸಹೋದರನ ಮೃತದೇಹವನ್ನು ಬಚ್ಚಿಡುವಲ್ಲಿ ನನಗೆ ಈ ಕಾಗೆಯಂತಾದರೂ ಆಗುವುದು ಸಾಧ್ಯವಗದೇ ಹೋಯಿತಲ್ಲ – ಎಂದು (ಸಂಕಟದಿಂದ) ಹೇಳಿದನು; ತರುವಾಯ, ಅತಿಯಾಗಿ ಖೇದಪಟ್ಟುಕೊಂಡನು. {30-31}

ಆ (ಕುಕೃತ್ಯದ) ಕಾರಣದಿಂದಾಗಿಯೇ ನಾವು ಇಸ್ರಾಈಲ್ ಸಂತತಿಯವರಿಗೆ [ಮುಂದೆ ತೋರಾ ಗ್ರಂಥವನ್ನು ನೀಡುವಾಗ ಅದರಲ್ಲಿ], ಇನ್ನೊಬ್ಬ ಮನುಷ್ಯಜೀವಿಯ ಜೀವಹರಣ ಮಾಡಿದುದಕ್ಕೆ (ಶಿಕ್ಷೆಯಾಗಿ) ಅಥವಾ ನಾಡಿನಲ್ಲಿ ಕ್ಷೋಭೆಯುಂಟು ಮಾಡಿದ (ಅಪರಾಧಕ್ಕಾಗಿ) ಹೊರತು ಯಾರಾದರೂ ಒಬ್ಬ ವ್ಯಕ್ತಿಯನ್ನು ಕೊಂದರೆ ಅದು ಇಡೀ ಮಾನವಕುಲವನ್ನು ಕೊಂದಂತೆ; ಹಾಗೆಯೇ, ಯಾರಾದರೂ ಒಬ್ಬ ವ್ಯಕ್ತಿಯ ಜೀವರಕ್ಷಣೆ ಮಾಡಿದರೆ ಅದು ಇಡೀ ಮಾನವಕುಲದ ಜೀವರಕ್ಷಣೆ ಮಾಡಿದಂತೆ – ಎಂದು ವಿಧಿಸಿದ್ದೆವು! [ಅಷ್ಟೇ ಅಲ್ಲ,] ಅವರಲ್ಲಿಗೆ ಅತ್ಯಂತ ಸ್ಪಷ್ಟವಾದ ಪುರಾವೆಗಳೊಂದಿಗೆ ನಮ್ಮ ದೂತರುಗಳು (ನಿರಂತರವಾಗಿ) ಆಗಮಿಸುತ್ತಿದ್ದರು. ಅದಾಗ್ಯೂ ಅವರ ಪೈಕಿಯ ಬಹಳಷ್ಟು ಜನರು ನಾಡಿನಲ್ಲಿ ಅತಿರೇಕವೆಸಗುವವರೇ ಆಗಿದ್ದರು. {32}

ಅಲ್ಲಾಹ್ ಮತ್ತು ಅವನ ದೂತರೊಡನೆ ಸಮರಕ್ಕಿಳಿದವರು ಹಾಗೂ ನಾಡಿನಲ್ಲಿ ಅಶಾಂತಿ-ಪ್ರಕ್ಷೋಭೆಯುಂಟು ಮಾಡಲು ಪ್ರಯತ್ನಿಸುವವರು ಯಾರೋ ಅಂಥವರಿಗೆ ಗೊತ್ತುಪಡಿಸಿದ ಶಿಕ್ಷೆಯು, ಒಂದೋ ಅಂಥವರನ್ನು ಉಗ್ರವಾಗಿ ವಧಿಸುವುದು, ಅಥವಾ ಭಯಾನಕ ರೀತಿಯಲ್ಲಿ ಶಿಲುಬೆಗೇರಿಸುವುದು, ಅಥವಾ ವಿರುದ್ಧ ಪಾರ್ಶ್ವಗಳಿಂದ ಅಂಥವರ ಕೈಕಾಲುಗಳನ್ನು ತುಂಡರಿಸುವುದು, ಅಥವಾ ನಾಡಿನಿಂದ ಅಂಥವರನ್ನು ಗಡಿಪಾರು ಮಾಡಿ ಬಿಡುವುದಲ್ಲದೆ ಬೇರೇನೂ ಅಲ್ಲ. ಅಂತಹ [ಭಯಂಕರ ಸ್ವರೂಪದ ಶಿಕ್ಷೆಯು] ಇಹಲೋಕದಲ್ಲಿ ಅವರಿಗಿರುವ ಅಪಮಾನವಾಗಿದೆ; ಮತ್ತು ಪರಲೋಕದಲ್ಲೂ ಅವರಿಗೆ ಅತಿಘೋರ ಶಿಕ್ಷೆ ಇರುವುದು. {33}

ಆದರೆ ನಿಮಗೆ ಸೆರೆ ಸಿಗುವ [ಅರ್ಥಾತ್ ಈ ಕಾನೂನನ್ನು ಕಾರ್ಯಗತ ಗೊಳಿಸಲು ರಾಜ್ಯವು ನಿಯೋಜಿಸಿದ ದಂಡಾಧಿಕಾರಿಗಳ ವಶಕ್ಕೆ ಬರುವ] ಮೊದಲೇ ಅಂಥವರು ಪಶ್ಚಾತ್ತಾಪಪಟ್ಟು ಮರಳಿದರೆ, ನೀವು ತಿಳಿದಿರಬೇಕು, ಅಲ್ಲಾಹ್ ನು ಕ್ಷಮಾಶೀಲನೂ ಅತ್ಯಂತ ಕರುಣೆ ತೋರುವವನೂ ಆಗಿರುವನು. {34}

ಧರ್ಮವಿಶ್ವಾಸಿಗಳಾದ ಓ ಜನರೇ, ನೀವು ಅಲ್ಲಾಹ್ ನ (ಇಂತಹ ಎಲ್ಲ ಆದೇಶಗಳನ್ನು) ಎಚ್ಚರಿಕೆಯೊಂದಿಗೆ ಪಾಲಿಸುವವರಾಗಿರಿ; ಜೊತೆಗೆ ಅವನ ಸಾಮೀಪ್ಯ ದೊರಕಿಸಿಕೊಡುವ ದಾರಿಯನ್ನು ಅರಸುತ್ತಲಿರಿ; (ಅದಕ್ಕಾಗಿ) ಅವನ ಮಾರ್ಗದಲ್ಲಿ ಹೆಚ್ಚಿನ ಪರಿಶ್ರಮ ಮಾಡಿರಿ. ಹಾಗಾದರೆ ನೀವು ವಿಜಯ ಸಾಧಿಸುವಿರಿ! {35}

[ಅದಕ್ಕೆ ಬದಲಾಗಿ ಸಮಾಜದಲ್ಲಿ] ಧಿಕ್ಕಾರ ಮೆರೆದ ಜನರು ಒಂದು ವೇಳೆ ಭೂಮಿಯ ಸಕಲ ಸಂಪತ್ತನ್ನೂ ಜೊತೆಗೆ ಅಷ್ಟೇ ಪ್ರಮಾಣದಲ್ಲಿ ಇನ್ನೂ ಹೆಚ್ಚಿನದನ್ನು ತಮ್ಮೊಂದಿಗೆ ತಂದು ಅದನ್ನು ಪುನರುತ್ಥಾನ ದಿನದ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಪರಿಹಾರವಾಗಿ ನೀಡಿದರೂ ಅವರಿಂದ ಅದನ್ನು (ಅಂದು) ಸ್ವೀಕರಿಸಲಾಗದು. ಮಾತ್ರವಲ್ಲ ಅವರಿಗಿರುವುದು ಬಹಳ ಯಾತನಾಮಯವಾದ ಶಿಕ್ಷೆಯಾಗಿದೆ! ನರಕಾಗ್ನಿಯಿಂದ ಹೊರಹೋಗಲು ಅವರು ಬಯಸುವರು ಆದರೆ ಅದರಿಂದ (ತಪ್ಪಿಸಿಕೊಂಡು) ಹೊರಹೋಗುವುದು ಅವರಿಗೆ ಸಾಧ್ಯವಲ್ಲ; ಅವರಿಗೆ (ಅಲ್ಲಿ) ನಿತ್ಯ ಯಾತನೆ ಇರುವುದು! {36-37}

ಇನ್ನು ಕದ್ದವನು ಪುರುಷನಾದರೂ ಸ್ತ್ರೀಯಾದರೂ [ಕಳ್ಳತನ ನ್ಯಾಯಾಲಯದಲ್ಲಿ ಸಾಬೀತಾದರೆ] ಅವರ ಕೈಗಳನ್ನು ಕತ್ತರಿಸಬೇಕು. ಅದೇ ಅವರೆಸಗಿದ (ಅಪರಾಧಕ್ಕೆ) ತಕ್ಕ ಶಾಸ್ತಿ, (ಇತರರು ಪಾಠಕಲಿಯುವಂತಾಗಲು) ಅಲ್ಲಾಹ್ ನ ಕಡೆಯಿಂದ ಇರುವ ಶಿಕ್ಷೆ! ಅಲ್ಲಾಹ್ ನಾದರೋ ಶಕ್ತಿಶಾಲಿಯೂ ವಿವೇಚನಾಶೀಲನೂ ಆಗಿರುವನು. ಆದರೆ ತಾನೆಸಗಿದ (ಅಂತಹ) ದುಷ್ಕೃತ್ಯದ ನಂತರ ಯಾರಾದರೂ ಪಶ್ಚಾತ್ತಾಪಪಟ್ಟು ತನ್ನನ್ನು ತಿದ್ದಿಕೊಂಡರೆ ಖಂಡಿತವಾಗಿಯೂ ಅಲ್ಲಾಹ್ ನು ಅಂಥವರಿಗೆ ಕರುಣೆ ತೋರುವನು. ನಿಜವಾಗಿ ಅಲ್ಲಾಹ್ ನು ಕ್ಷಮಿಸುವವನೂ ಬಹಳವಾಗಿ ಕರುಣೆತೋರುವವನೂ ಆಗಿರುವನು. {38-39}

ಆಕಾಶಗಳ ಮತ್ತು ಭೂಮಿಯ ಆಧಿಪತ್ಯವೆಲ್ಲ ಸಂಶಯರಹಿತವಾಗಿ ಅಲ್ಲಾಹ್ ನಿಗೆ ಮಾತ್ರ ಸೇರಿದೆ ಎಂಬ ವಿಷಯವು ನಿಮಗೆ ತಿಳಿದಿದೆಯಲ್ಲವೇ? ಅವನು ಯಾರನ್ನು ಶಿಕ್ಷಿಸಲು ಬಯಸುವನೋ ಶಿಕ್ಷಿಸುವನು ಮತ್ತು ಯಾರನ್ನು ಕ್ಷಮಿಸಲು ಬಯಸುವನೋ ಕ್ಷಮೆ ನೀಡುವನು. ಹೌದು, ಅಲ್ಲಾಹ್ ನು ಅಂತಹ ಎಲ್ಲಾ ವಿಷಯಗಳಲ್ಲಿ ಸಕಲ ಸಾಮರ್ಥ್ಯವನ್ನು ಹೊಂದಿರುವನು. {40}

ಓ ಪೈಗಂಬರರೇ! ನಾವು ವಿಶ್ವಾಸಿಗಳಾಗಿದ್ದೇವೆ ಎಂದು ಕೇವಲ ಬಾಯಿಮಾತಿನ ಮೂಲಕ ಘೋಷಿಸುವ ಆದರೆ ಹೃದಯಗಳಲ್ಲಿ ಸ್ವಲ್ಪವೂ ವಿಶ್ವಾಸಿಗಳಾಗದ ಈ ಜನರು, ಹಾಗೂ ಯಹೂದ್ಯರಿಗೆ ಸೇರಿದ ಕೆಲವರು [ಅಲ್ಲಾಹ್ ನು ನೀಡುವ ಧರ್ಮಾದೇಶಗಳಿಗೆ] ಧಿಕ್ಕಾರ ತೋರುವಲ್ಲಿ ಪರಸ್ಪರ ನಡೆಸುವ ಪೈಪೋಟಿಯು ನಿಮ್ಮನ್ನು ದುಃಖಿತರನ್ನಾಗಿ ಮಾಡದಿರಲಿ. ಅವರೆಲ್ಲ ಸುಳ್ಳು ಸಂಗತಿಗಳಿಗೆ ಕಿವಿಯೊಡ್ಡಿ ಆಲಿಸುವವರಾಗಿದ್ದಾರೆ – ಅಂದರೆ (ಓ ಪೈಗಂಬರರೇ,) ನಿಮ್ಮ ಮುಂದೆ ಎಂದೂ ಬಾರದ ಬೇರೆಯೇ ಗುಂಪೊಂದು (ಹರಡುತ್ತಿರುವ ಸುಳ್ಳು ಸಂಗತಿಗಳನ್ನು) ಅವರು ಉತ್ಸಾಹದಿಂದ ಆಲಿಸುವವರಾಗಿದ್ದಾರೆ! ದಿವ್ಯವಚನಗಳ ಯಥಾರ್ಥ ಸನ್ನಿವೇಶ-ಹಿನ್ನೆಲೆಗಳು ಸ್ಪಷ್ಟವಾದ ಬಳಿಕವೂ (ಅಪಾರ್ಥ ಬರುವಂತೆ ಆ ಗುಂಪು) ಅದನ್ನು ತಿರುಚುತ್ತಿದೆ! (ಈ ಪೈಗಂಬರರು) ನಿಮಗೆ ಇಂತಿಂತಹ [ಅರ್ಥಾತ್ ನಾವು ಬಯಸುತ್ತಿರುವಂತಹ] ಆದೇಶಗಳನ್ನು ನೀಡಿದರೆ ಮಾತ್ರ ನೀವು ಸ್ವೀಕರಿಸಿರಿ; ಅದಕ್ಕೆ ಬದಲು (ಬೇರೆ ಆದೇಶಗಳೇನಾದರೂ) ನಿಮಗೆ ನೀಡಲ್ಪಟ್ಟರೆ ಕೂಡಲೇ ನೀವು ಜಾಗೃತರಾಗಿರಿ ಎಂದು ಅವರು [ಜನರಿಗೆ] ಬೋಧಿಸುತ್ತಿದ್ದಾರೆ. [ತಮ್ಮದೇ ಕೃತ್ಯಗಳ ಕಾರಣ ಅವರು ಅಲ್ಲಾಹ್ ನ ಪರೀಕ್ಷೆಯಲ್ಲಿ ಬಿದ್ದಿರುವರು;] ಇನ್ನು ಯಾರನ್ನು ಅಲ್ಲಾಹ್ ನು ಪರೀಕ್ಷೆಗೆ ಒಳಪಡಿಸವನೋ ಅಂಥವನಿಗೆ ಅಲ್ಲಾಹ್ ನಿಂದ ಒಂದಿಷ್ಟೂ ನೆರವು ದೊರಕಿಸಿ ಕೊಡುವುದು (ಪೈಗಂಬರರೇ) ನಿಮ್ಮ ಸ್ವಾಧೀನದಲ್ಲಿ ಸ್ವಲ್ಪವೂ ಇಲ್ಲದ ವಿಷಯ. ಅಂತಹ ಜನರ ಹೃದಯಗಳನ್ನು ಅಲ್ಲಾಹ್ ನು ಶುದ್ಧಿಗೊಳಿಸಲೂ ಬಯಸುವುದಿಲ್ಲ. ಇಹಲೋಕ ಜೀವನದಲ್ಲಿ ಅಪಮಾನವೂ ಪರಲೋಕದಲ್ಲಿ ಕಠೋರ ಶಿಕ್ಷೆಯೂ ಅವರಿಗೆ ಇರುವುದು. {41}

ಅವರು ಅಸತ್ಯವಾದ ಮಾತುಗಳಿಗೆ ಬಹಳ ಉತ್ಸುಕತೆಯೊಂದಿಗೆ ಕಿವಿಯೊಡ್ಡುವವರು ಮತ್ತು ಅನ್ಯಾಯ-ಅಕ್ರಮಗಳಿಂದ ಕೂಡಿದ ಸಂಪಾದನೆಯನ್ನು ಆಸ್ವಾದಿಸಿ ತಿನ್ನುವವರು! ನಿಮ್ಮ ಬಳಿಗೆ ಅವರೇನಾದರೂ ಬಂದರೆ [ಅವರೊಳಗಿನ ವ್ಯಾಜ್ಯಗಳನ್ನು] ನ್ಯಾಯುತವಾಗಿ ನೀವು ಬಗೆಹರಿಸಬಹುದು ಅಥವಾ ಅವರನ್ನು ಅವಗಣಿಸಿ ಮುಖ ತಿರುಗಿಸಿಕೊಳ್ಳಲೂ ಬಹುದು. ನೀವು ಅವರನ್ನು ಹಾಗೆ ಅವಗಣಿಸಿದಾಗಲೂ ನಿಮಗೆ ಯಾವುದೇ ಹಾನಿಯುಂಟು ಮಾಡಲು ಅವರಿಂದ ಸಾಧ್ಯವಿಲ್ಲ. ಇನ್ನು ನೀವು ಅವರ ನಡುವಿನ (ವ್ಯಾಜ್ಯಗಳಲ್ಲಿ) ತೀರ್ಪು ನೀಡಲಿಚ್ಛಿಸಿದರೆ ನ್ಯಾಯಯುತವಾದ ತೀರ್ಪನ್ನೇ ನೀಡಿ. (ಏಕೆಂದರೆ) ಖಂಡಿತಾ ಅಲ್ಲಾಹ್ ನು ನ್ಯಾಯ ಪಾಲಕರನ್ನು ಮೆಚ್ಚುವವನಾಗಿದ್ದಾನೆ. {42}

ಅಲ್ಲಾಹ್ ನ ವಿಧಿನಿಷೇಧಗಳಿರುವ ತೋರಾ ಗ್ರಂಥವು ಅವರ ಬಳಿಯಲ್ಲೇ ಇರುವಾಗ ಅವರು [ಅರ್ಥಾತ್ ಮದೀನಾದಲ್ಲಿ ತಂಗಿರುವ ಆ ಯಹೂದ್ಯರು] ನಿಮ್ಮನ್ನು ವ್ಯಾಜ್ಯಗಳ ತೀರ್ಪುಗಾರನಾಗಿ ಮಾಡಿಕೊಳ್ಳುವುದು ಏಕೆ?! ಹಾಗೆ ಮಾಡಿಕೊಂಡ ನಂತರವೂ ಅವರು (ನೀವು ನೀಡಿದ ತೀರ್ಪಿನಿಂದ) ಮುಖ ತಿರುಗಿಸಿಕೊಳ್ಳುತ್ತಿದ್ದಾರೆ! ಯಥಾರ್ಥದಲ್ಲಿ ಅವರು ವಿಶ್ವಾಸಿಗಳೇ ಅಲ್ಲ! {43}

ಆ ತೋರಾ ವನ್ನು ಇಳಿಸಿಕೊಟ್ಟವರೂ ನಾವೇ ಆಗಿರುತ್ತೇವೆ. ಅದರಲ್ಲಿ ಮಾರ್ಗದರ್ಷನವೂ ಇದೆ ಮತ್ತು ಪ್ರಕಾಶವೂ ಇದೆ. ಮುಸ್ಲಿಮರಾಗಿದ್ದ [ಅರ್ಥಾತ್ ಅಲ್ಲಾಹ್ ನ ಆಜ್ಞಾನುವರ್ತಿಗಳಾಗಿದ್ದ] ಪ್ರವಾದಿಗಳೆಲ್ಲರೂ ಅದರ ಪ್ರಕಾರವೇ ಯಹೂದ್ಯರ ವ್ಯಾಜ್ಯಗಳಲ್ಲಿ ತೀರ್ಪುನೀಡುತ್ತಿದ್ದರು; ಮಾತ್ರವಲ್ಲ (ಯಹೂದ್ಯರಿಗೆ ಸೇರಿದ) ಸಂತರು ಹಾಗೂ ಧಾರ್ಮಿಕ ವಿಧ್ವಾಂಸರು ಕೂಡ, ಅವರನ್ನು ಅಲ್ಲಾಹ್ ನ ಕಾನೂನಿನ ಪಾಲಕರನ್ನಾಗಿ ಮಾಡಲಾಗಿದ್ದ ಕಾರಣಕ್ಕಾಗಿ ಮತ್ತು ಅವರು ಅದಕ್ಕೆ ಸಾಕ್ಷಿಗಳಾಗಿ ನಿಂತ ಕಾರಣಕ್ಕಾಗಿ (ಅದರ ಪ್ರಕಾರವೇ ತೀರ್ಪುನೀಡುತ್ತಿದ್ದರು). [ಯಹೂದ್ಯರೇ, ದೈವಿಕ ಕಾನೂನಿನ ವಿಷಯದಲ್ಲಿ] ನೀವೂ ಜನರಿಗೆ ಅಂಜಬೇಕಾಗಿಲ್ಲ ಬದಲಾಗಿ ನನ್ನ ಭಯವಿರಿಸಿಕೊಳ್ಳಿ. ಮತ್ತು ನನ್ನ ವಚನಗಳನ್ನು (ಲೌಕಿಕ ಲಾಭಗಳಿಗಾಗಿ) ತುಚ್ಛವಾದ ಬೆಲೆಗೆ ಮಾರುವವರಾಗಬೇಡಿ; ಅಲ್ಲಾಹ್ ನು ಇಳಿಸಿಕೊಟ್ಟ ಕಾನೂನಿನ ಪ್ರಕಾರ ಯಾರು ತೀರ್ಪುನೀಡುವುದಿಲ್ಲವೋ ಅವರೇ ಧರ್ಮಧಿಕ್ಕಾರಿಗಳಾಗಿರುವರು [ಎಂದು ಆ ತೋರಾ ದಲ್ಲಿ ಬೋಧಿಸಲಾಗಿದೆ.] {44}

ಜೀವಕ್ಕೆ ಪ್ರತಿಯಾಗಿ ಜೀವ, ಕಣ್ಣಿಗೆ ಪ್ರತಿಯಾಗಿ ಕಣ್ಣು, ಮೂಗಿಗೆ ಪ್ರತಿಯಾಗಿ ಮೂಗು, ಕಿವಿಗೆ ಪ್ರತಿಯಾಗಿ ಕಿವಿ, ಹಲ್ಲಿಗೆ ಪ್ರತಿಯಾಗಿ ಹಲ್ಲು, ಮಾತ್ರವಲ್ಲ ಇತರ ಎಲ್ಲಾ ಗಾಯಗಳಿಗೆ ಸಂಬಂಧಿಸಿದಂತೆ ನ್ಯಾಯಬದ್ಧ-ಪ್ರತೀಕಾರದ [ಅರಬಿ: ಕಿಸಾಸ್] ಹಕ್ಕನ್ನು ಅದೇ ತೋರಾ ದಲ್ಲಿ ನಾವು ಅವರಿಗೆ ಅನುಶಾಸನಗೊಳಿಸಿರುತ್ತೇವೆ. ಇನ್ನು ಯಾರಾದರೂ [ನ್ಯಾಯಬದ್ಧ-ಪ್ರತೀಕಾರದ ಆ ಹಕ್ಕನ್ನು ಉಪಯೋಗಿಸದೆ ಅದನ್ನು] ದಾನಗೈದರೆ ಅದು ಆತನಿಗೆ (ತನ್ನ ಪಾಪ, ಪ್ರಮಾದಗಳ) ಪ್ರಾಯಶ್ಚಿತ್ತವಾಗಲಿರುವುದು! ಅಲ್ಲಾಹ್ ನು ಇಳಿಸಿಕೊಟ್ಟ (ಇಂತಹ) ಕಾನೂನನ್ನು ಆಧರಿಸಿ ಯಾರು ತೀರ್ಪುನೀಡುವುದಿಲ್ಲವೋ ಅವರೇ ಅಕ್ರಮಿಗಳಾಗಿರುವರು [ಎಂಬುದನ್ನೂ ತೋರಾದಲ್ಲಿ ಉಪದೇಶಿಸಲಾಗಿತ್ತು]. {45}

ತದನಂತರ (ಆ ಎಲ್ಲ ಆಜ್ಞಾನುವರ್ತಿ ಪ್ರವಾದಿಗಳು) ನಡೆದ ಹಾದಿಯಲ್ಲೇ ನಡೆಯುವಂತೆ ನಾವು ಮರ್‌ಯಮ್ ರ ಪುತ್ರ ಈಸಾ ರನ್ನು [ಅರ್ಥಾತ್ ಏಸು ಕ್ರಿಸ್ತರನ್ನು] ಅದಾಗಲೇ ಅವರ ಮುಂದಿರುವ ತೋರಾ ವನ್ನು ದೃಢೀಕರಿಸುವವನಾಗಿ ಕಳಿಸಿದೆವು; ಮತ್ತು ನಾವು ಅವರಿಗೆ ಇಂಜೀಲ್ [ಅರ್ಥಾತ್ ‘ಹೊಸ ಒಡಂಬಡಿಕೆ’] ಯನ್ನು ನೀಡೀದೆವು; ಅದರಲ್ಲೂ ಮಾರ್ಗದರ್ಶನವಿತ್ತು, ಪ್ರಕಾಶವೂ ಇತ್ತು. ಅದೂ ಸಹ ಅದಾಗಲೇ ಅವರ ಬಳಿ ಇದ್ದ ತೋರಾ ವನ್ನು ಪ್ರಮಾಣೀಕರಿಸುವುದರ ಜೊತೆಗೆ ಭಯಭಕ್ತಿಯುಳ್ಳ ಜನರಿಗೆ ಮಾರ್ಗದರ್ಶಿಯೂ ಉಪದೇಶವೂ ಆಗಿತ್ತು. ಮತ್ತು ಆ ಇಂಜೀಲ್ ಅನ್ನು ಹೊಂದಿದವರೂ ಅದರಲ್ಲಿ ಅಲ್ಲಾಹ್ ನು ಇಳಿಸಿರುವ ನಿಯಮಗಳಿಗೆ ಅನುಗುಣವಾಗಿಯೇ ತೀರ್ಪು ನೀಡಬೇಕು ಎಂದೂ, ಇನ್ನು ಯಾರು ಅಲ್ಲಾಹ್ ನು ಇಳಿಸಿಕೊಟ್ಟ ನಿಯಮಗಳನುಸಾರ ತೀರ್ಪುನೀಡುವುದಿಲ್ಲವೋ ಅವರೇ ಆಗಿರುವರು ಪಾಪಿಗಳು [ಎಂದೂ ಉಪದೇಶಿಸಲಾಗಿತ್ತು]. {46-47}

[ಓ ಪೈಗಂಬರರೇ, ಈಗ ಕೊನೆಯದಾಗಿ] ನಾವು ಪರಮ ಸತ್ಯವನ್ನೊಳಗೊಂಡ ಈ ಗ್ರಂಥವನ್ನು (ಅರ್ಥಾತ್ ಈ ಕುರ್‌ಆನ್ ಅನ್ನು), ಅದರ ಮುಂದೆ ಅದಾಗಲೇ ಇರುವಂತಹ ದಿವ್ಯಗ್ರಂಥವನ್ನು ಸಮರ್ಥಿಸಲು ಮತ್ತು ಅದರ ಮೇಲೆ ತನ್ನ ಪ್ರಾಬಲ್ಯ ಸ್ಥಾಪಿಸಲು ನಿಮ್ಮತ್ತಲೂ ಕಳಿಸಿರುವೆವು. ಆದ್ದರಿಂದ ನೀವೂ ಕೂಡ ಅಲ್ಲಾಹ್ ನು ನಿಮಗೆ ಕಳಿಸಿದ ನಿಯಮಗಳ ಪ್ರಕಾರವೇ ಅವರ ನಡುವೆ ಇರುವ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಿ. ನಿಮ್ಮಲ್ಲಿಗೆ ಬಂದಿರುವ ಸಾಕ್ಷಾತ್ ಸತ್ಯವನ್ನು ಬಿಟ್ಟು [ಒತ್ತಾಯಕ್ಕೆ ಮಣಿದು] ಆ ಜನರ ಮನೋಬಯಕೆಗಳನ್ನು ನೀವು ಅನುಸರಿಸದಿರಿ. ನಿಮ್ಮ ಪೈಕಿಯ ಪ್ರತಿ ಸಮುದಾಯಕ್ಕೂ ನಾವು ಪ್ರತ್ಯೇಕ ನಿಯಮಾವಳಿಯನ್ನೂ ಅದರ ಅನುಷ್ಠಾನ ರೀತಿಯನ್ನೂ ಗೊತ್ತುಪಡಿಸಿರುವೆವು. ಅಲ್ಲಾಹ್ ನು ಬಯಸಿದ್ದಿದ್ದರೆ ನಿಮ್ಮೆಲ್ಲರನ್ನೂ [ಅರ್ಥಾತ್ ನಿಮ್ಮಲ್ಲಿನ ವಿಭಿನ್ನ ಸಮುದಾಯಗಳನ್ನು] ಖಂಡಿತಾ ಒಂದೇ ಸಮುದಾಯವಾಗಿ ಮಾಡಿ ಬಿಡುತ್ತಿದ್ದನು. ಆದರೆ ನಿಮ್ಮಲ್ಲಿಯ ಪ್ರತಿ ಸಮುದಾಯಕ್ಕೂ ಯಾವ (ಕಾನೂನು-ಕಟ್ಟಳೆ ಅಥವಾ ಶರೀಅತ್) ನೀಡಲಾಗಿದೆಯೋ ಅದರ ಮೂಲಕವೇ ನಿಮ್ಮನ್ನು ಅವನು ಪರೀಕ್ಷಸಲು ಬಯಸುತ್ತಾನೆ. ಆದ್ದರಿಂದ [ಪರಸ್ಪರ ವಿವಾದಗಳಲ್ಲಿ ತೊಡಗುವ ಬದಲು] ಒಳಿತಿನ ಕಾರ್ಯಗಳಲ್ಲಿ ನೀವು ಒಬ್ಬರಿಗಿಂತ ಒಬ್ಬರು ಮುಂದೆ ಸಾಗಿರಿ. (ಅಂತಿಮವಾಗಿ) ಅಲ್ಲಾಹ್ ನ ಕಡೆಗೇ ನೀವೆಲ್ಲ ಮರಳಬೇಕಾಗಿದೆ! ಆಗ ನೀವು ವಿವಾದಗಳಲ್ಲಿ ತೊಡಗಿದ್ದ ವಿಷಯಗಳ (ನಿಜಸ್ಥಿತಿಯನ್ನು) ಅವನು ನಿಮಗೆ ಮನಗಾಣಿಸಲಿರುವನು. {48}

ಮತ್ತು ಹಾಗೆಯೇ, ಅಲ್ಲಾಹ್ ನು ಏನನ್ನು ಇಳಿಸಿರುವನೋ ಆ (ಕಾನೂನಿನ) ಪ್ರಕಾರವೇ ನೀವು ಅವರ ನಡುವಿನ ವಿವಾದಗಳಲ್ಲಿ ತೀರ್ಪುನೀಡಬೇಕು; [ಅವರು ಅದೆಷ್ಟು ಹಂಬಲಿಸಿದರೂ] ಅವರ ಮನಸ್ಸಿನ ಆಕಾಂಕ್ಷೆಗಳನ್ನು ನೀವು (ತೀರ್ಪು ನೀಡುವಾಗ) ಅನುಸರಿಸದಿರಿ. ಅಲ್ಲಾಹ್ ನು ನಿಮ್ಮತ್ತ ಕಳಿಸಿರುವ ಯಾವೊಂದು ವಿಧಿ ನಿಬಂಧನೆಯ ಕುರಿತೂ ನಿಮ್ಮನ್ನು ಗೊಂದಲಕ್ಕೊಳಪಡಿಸದಂತೆ ಅವರಿಂದ ನೀವು ಜಾಗೃತವಾಗಿಯೇ ಇರಿ. [ಇನ್ನು ನೀವು ವಿಧಿಸಿದ್ದನ್ನು] ತಿರಸ್ಕರಿಸಿ ಅವರು ಬೇರೆಡೆಗೆ ಮುಖ ಮಾಡಿಕೊಂಡರೆ, ಅವರ ಕೆಲವೊಂದು ಅಪರಾಧಗಳ ಕಾರಣ ಅವರಿಗೆ ಶಿಕ್ಷೆಯನ್ನೇ ನೀಡಲು ಅಲ್ಲಾಹ್ ನು ಉದ್ದೇಶಿಸಿರುವನು ಎಂಬುದನ್ನು (ಪೈಗಂಬರರೇ,) ನೀವು ತಿಳಿದುಕೊಳ್ಳಿ. ನಿಜವೇನೆಂದರೆ ಆ ಜನರಲ್ಲಿ ಹೆಚ್ಚಿನವರು (ದೇವಾಜ್ಞೆ ಮೀರಿದ) ಪಾಪಿಗಳಾಗಿರುವರು. [ಅಲ್ಲಾಹ್ ನು ನೀಡುವ ಕಾನೂನಿಗೆ ಬದಲು] ಅಜ್ಞಾನ ಕಾಲದಲ್ಲಿದ್ದಂತಹ ವಿಧಿ ವಿಧಾನಗಳನ್ನು ಅವರು (ನಿಮ್ಮಿಂದ) ಬಯಸುತ್ತಿದ್ದಾರೇನು?! ದೃಢನಂಬಿಕೆ ಇಟ್ಟವರಿಗೆ ಅಲ್ಲಾಹ್ ನ ತೀರ್ಪಿಗಿಂತ ಉತ್ತಮವಾದ ತೀರ್ಪು ಬೇರೆ ಯಾರದ್ದಿರಬಹುದು!! {49-50}

ಓ ವಿಶ್ವಾಸಿಗಳ ಸಮುದಾಯವೇ, [ಮದೀನಾ ದಲ್ಲೇ ವಾಸವಾಗಿದ್ದುಕೊಂಡು ಪೈಗಂಬರರ ಮತ್ತು ಅಲ್ಲಾಹ್ ನ ತೀರ್ಪನ್ನು ಸಂಪೂರ್ಣವಾಗಿ ತಿರಸ್ಕರಿಸಿರುವ] ಅಂತಹ ಯಹೂದ್ಯರನ್ನು ಮತ್ತು ಅಂತಹ ಕ್ರೈಸ್ತರನ್ನು ನೀವು ನಿಮ್ಮ ಮಿತ್ರರೂ ಹಿತೈಷಿಗಳೂ ಆಗಿ ಕಾಣದಿರಿ. ವಸ್ತುತಃ [ಪೈಗಂಬರರ ಸಂದೇಶವನ್ನು ಹತ್ತಿಕ್ಕುವ ಪ್ರಯತ್ನದಲ್ಲಿ] ಅವರು ಪರಸ್ಪರರ ಮಿತ್ರರೂ ಸಹಾಯಕರೂ ಆಗಿರುವರು. ಆದ್ದರಿಂದ ನಿಮ್ಮ ಪೈಕಿಯ ಯಾರಾದರೂ ಅಂಥವರೊಂದಿಗೆ ಮೈತ್ರಿ ಬೆಳಸಿದರೆ ಆತನು ಖಂಡಿತ ಅವರ ಕೂಟಕ್ಕೇ ಸೇರಿದವನಾಗುವನು! ಅಲ್ಲಾಹ್ ನಾದರೋ ಅನ್ಯಾಯವೆಸಗುವ ಅಂತಹ ಜನಸಮುದಾಯಕ್ಕೆ ಮಾರ್ಗದರ್ಶನ ನೀಡುವುದಿಲ್ಲ. ಹಾಗಿರುವಾಗ, ತಮ್ಮ ಹೃದಯಗಳಲ್ಲಿ [ಗುಲಾಮತನದ, ಕಾಪಟ್ಯದ] ಕಾಯಿಲೆ ಹೊಂದಿರುವ ಕೆಲವರು ಅಂಥವರ ನಡುವೆ (ಗೆಳತನ ಸ್ಥಾಪಿಸಲು) ಓಡಾಟದಲ್ಲಿ ತೊಡಗಿರುವುದನ್ನು ನೀವು ಕಾಣುವಿರಿ. ವಿಪತ್ತು ಬಂದು ನಮ್ಮನ್ನು ಎಲ್ಲಿ ಅಪ್ಪುವುದೋ ಎಂಬ ಭೀತಿ ನಮಗಿದೆ ಎಂದು ಅವರು (ತಮ್ಮ ನಿಲುವನ್ನು ಸಮರ್ಥಿಸಲು) ಹೇಳುತ್ತಿರುವರು. ಆದರೆ ಅಲ್ಲಾಹ್ ನು ಅತಿಶೀಘ್ರದಲ್ಲೇ (ನಿಮ್ಮ ಪಾಲಿಗೆ) ವಿಜಯ ತಂದು ಕೊಡುವುದೋ ಅಥವಾ ತನ್ನ ವತಿಯಿಂದ (ನಿಮಗೆ ಅನುಕೂಲವಾಗುವಂತೆ) ವಿಧಿಸುವುದೋ ಮಾಡಿದರೆ, ಆಗ ಅಂಥವರು ತಮ್ಮ ಹೃದಯಗಳೊಳಗೆ ಯಾವೆಲ್ಲ ವಿಚಾರಗಳನ್ನು ಗೌಪ್ಯವಾಗಿರಿಸಿದ್ದರೋ ಅದಕ್ಕಾಗಿ ಅತೀವ ಪಶ್ಚಾತ್ತಾಪ ಪಡಲಿರುವರು. (ಅವರ ಆ ದುರವಸ್ಥೆಯನ್ನು ಕಂಡಾಗ) ‘ಖಂಡಿತವಾಗಿಯೂ ನಿಮ್ಮೊಂದಿಗೇ ಇದ್ದೇವೆ’ ಎಂದು ಅಲ್ಲಾಹ್ ನ ಹೆಸರಿನಲ್ಲಿ ಶಪಥ ಮಾಡಿ (ನಂಬಿಕೆ ಹುಟ್ಟಿಸಲು) ಪರಿಶ್ರಮಪಟ್ಟು ಪ್ರಮಾಣಾದಿಗಳನ್ನು ಮಾಡುತ್ತಿದ್ದವರು ಈ ಜನರೇ ಆಗಿದ್ದರೇನು – ಎಂದು ನಿಜವಾದ ವಿಶ್ವಾಸಿಗಳು (ಚಕಿತಗೊಂಡು) ಕೇಳುವರು! ಅವರ ಕರ್ಮಗಳೆಲ್ಲವೂ ವ್ಯರ್ಥವಾದುವು; ಹೌದು, ಅವರು ನಷ್ಟಕ್ಕೊಳಗಾದರು! {51-53}

[ಅವರ ಆ ನಿಲುವು ಅಲ್ಲಾಹ್ ನ ಧರ್ಮದಿಂದ ಹಿಂದಿರುಗಿ ಬಿಡುವಂಥದ್ದು! ಆದ್ದರಿಂದ] ಓ ಧರ್ಮವಿಶ್ವಾಸಿಗಳೇ, ನಿಮ್ಮ ಪೈಕಿಯ ಯಾರಾದರೂ ತನ್ನ ಧರ್ಮದಿಂದ [ಅರ್ಥಾತ್ ಇಸ್ಲಾಮ್ ಧರ್ಮದಿಂದ] ಹಿಂದಿರುಗಿ ಹೋದರೆ ಶೀಘ್ರವೇ ಅಲ್ಲಾಹ್ ನು ತನ್ನ ಪ್ರೀತಿಗೆ ಪಾತ್ರರಾದ ಹಾಗೂ ಅಲ್ಲಾಹ್ ನನ್ನು ಪ್ರೀತಿಸುವ ಬೇರೊಂದು ಜನವಿಭಾಗವನ್ನು (ಅವರಿಗೆ ಬದಲಾಗಿ) ತರುವನು. ಅವರು ವಿಶ್ವಾಸಿಗಳ ಪಾಲಿಗೆ ವಿನಮ್ರ ಹಾಗೂ ಧಿಕ್ಕಾರಿಗಳ ಪಾಲಿಗೆ ಕಠೋರವಾಗಿರುವರು. ದೂಷಿಸುವವರ ದೂಷಣೆಯನ್ನು ಲೆಕ್ಕಿಸದೆ ಅಲ್ಲಾಹ್ ನ ಮಾರ್ಗದಲ್ಲಿ ಅವರು ಹೆಚ್ಚಿನ ಪರಿಶ್ರಮದೊಂದಿಗೆ ದುಡಿಯುವರು. ಅದೆಲ್ಲ ಅಲ್ಲಾಹ್ ನ ಕೃಪೆಯಾಗಿದ್ದು ತಾನು ಬಯಸಿದವರಿಗೆ ಅವನು ಅದನ್ನು ದಯಪಾಲಿಸುತ್ತಾನೆ. ಹಾಗೆ ಅಲ್ಲಾಹ್ ನು ಧಾರಾಳವಾಗಿ ನೀಡುವವನೂ ಎಲ್ಲವನ್ನೂ ಬಲ್ಲವನೂ ಆಗಿರುವನು. [ಇಸ್ಲಾಮ್ ಧರ್ಮವನ್ನು ತೊರೆಯುವವರು ನಿಮಗೆ ಎಂದೂ ಮಿತ್ರರಾಗಲಾರರು]; ಯಥಾರ್ಥದಲ್ಲಿ ಅಲ್ಲಾಹ್ ನೂ ಅವನ ದೂತರೂ; ಹಾಗೆಯೇ ವಿನಮ್ರತಾ ಭಾವ ಹೊಂದಿರುತ್ತಾ ನಮಾಝ್ ನಿರ್ವಹಿಸುವ ಮತ್ತು ಝಕಾತ್ ಪಾವತಿಸುವ ವಿಶ್ವಾಸಿಗಳು ಮಾತ್ರವೇ ನಿಮ್ಮ (ನಿಜವಾದ) ಮಿತ್ರರೂ ಹಿತಾಕಾಂಕ್ಷಿಗಳೂ ಆಗಿರುವರು. {54-55}

ಇನ್ನು, ಯಾರು ಅಲ್ಲಾಹ್ ನನ್ನೂ ಅವನ ದೂತರನ್ನೂ ಹಾಗೂ (ಅವರ ಕರೆಗೆ ಓಗೊಟ್ಟು) ವಿಶ್ವಾಸಿಗಳಾದವರನ್ನೂ ಮಿತ್ರರಾಗಿ ಮಾಡಿಕೊಳ್ಳುವರೋ [ಅವರೇ ವಿಜಯಿಗಳಾಗುವರು]; ಏಕೆಂದರೆ ಅಲ್ಲಾಹ್ ನ ಪಕ್ಷದವರಿಗೆ ಮೇಲುಗೈ ಸಿದ್ಧಿಯಾಗಿಯೇ ತೀರುವುದು. {56}

ವಿಶ್ವಾಸಿಗಳಾದ ಓ ಜನರೇ, ನೀವು ನಿಜವಾದ ಧರ್ಮವಿಶ್ವಾಸಿಗಳು ಹೌದಾದರೆ ನಿಮಗಿಂತ ಮುಂಚೆ ಗ್ರಂಥ ನೀಡಲ್ಪಟ್ಟ ಈ ಜನರ ಪೈಕಿ ನಿಮ್ಮ ಧರ್ಮವನ್ನು ಗೇಲಿ ಮಾಡುವ ಮತ್ತು ತಮಾಷೆಗೆ ಗುರಿಪಡಿಸುತ್ತಿರುವವರನ್ನು ಹಾಗೂ ಇತರ ಧರ್ಮಧಿಕ್ಕಾರಿಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳ ಬೇಡಿ; ಮತ್ತು ನೀವು ಅಲ್ಲಾಹ್ ನಿಗೆ ಭಯಭಕ್ತಿ ತೋರುವವರಾಗಿರಿ. ನೀವು ನಮಾಝ್ ಗಾಗಿ ಕರೆ ನೀಡಿದಾಗ ಅವರು ಅದನ್ನು ಅಪಹಾಸ್ಯ ಮಾಡಿ ಒಂದು ತಮಾಷೆಯಂತೆ ತೆಗೆದುಕೊಳ್ಳುವುದನ್ನು (ನೀವು ನೋಡುತ್ತಿದ್ದೀರಿ). ಬುದ್ಧಿಯನ್ನು (ಸ್ವಲ್ಪವೂ) ಉಪಯೋಗಿಸದೇ ಇರುವ ಜನರಾದ್ದರಿಂದ ಅವರು ಹಾಗೆ ಮಾಡುತ್ತಿದ್ದಾರೆ. {57-58}

ದಿವ್ಯಗ್ರಂಥವನ್ನು ಹೊಂದಿರುವವರೇ, ನಾವು ಅಲ್ಲಾಹ್ ನಲ್ಲಿ ವಿಶ್ವಾಸವಿಟ್ಟ ಮತ್ತು ನಮ್ಮೆಡೆಗೆ ಯಾವ (ದಿವ್ಯ ಸಂದೇಶ) ಕಳಿಸಲಾಗಿದೆಯೋ ಅದರಲ್ಲಿ ಮತ್ತು ಅದಕ್ಕಿಂತ ಮುಂಚೆ ಯಾವ (ದಿವ್ಯ ಸಂದೇಶಗಳನ್ನು) ಕಳಿಸಲಾಗಿತ್ತೋ ಅವೆಲ್ಲದರಲ್ಲಿ ವಿಶ್ವಾಸವಿಟ್ಟ ಕಾರಣಕ್ಕಾಗಿ, ಹಾಗೂ (ಅಲ್ಲಾಹ್ ನಿಗೆ) ಅವಿಧೇಯತೆ ತೋರುವವರಲ್ಲಿ ನಿಮ್ಮ ಸಮುದಾಯದವರೇ ಹೆಚ್ಚಿನವರು ಎಂಬುದಲ್ಲದೆ ಬೇರೆ ಯಾವ ಕಾರಣಕ್ಕಾಗಿ ನೀವು ನಮ್ಮೊಂದಿಗೆ ಅಸೂಯೆ ಅಸಮಾಧಾನ ಪಡುತ್ತಿರುವಿರಿ – ಎಂದು (ಪೈಗಂಬರರೇ) ನೀವು ಕೇಳಿರಿ. {59}

oooooooo

oooooooo

oooooooo

Advertisements