ಅತ್-ತ್ವಾರಿಕ್

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುತ್ತೇನೆ)!

ಆಕಾಶವು ಸಾಕ್ಷಿ! (ರಾತ್ರಿಯಲ್ಲಿ ಪ್ರತ್ಯಕ್ಷ್ಯಗೊಳ್ಳುವ) ‘ತ್ವಾರಿಕ್’ ಸಹ ಸಾಕ್ಷಿ! ‘ತ್ವಾರಿಕ್’ ಎಂದರೇನು ಎಂದು ನೀವು ಬಲ್ಲಿರಾ? ಅದು (ಕೋರೈಸುವ) ಹೊಳಪುಳ್ಳ ಒಂದು ನಕ್ಷತ್ರ! ತನ್ನ ಮೇಲೆ (ಅಲ್ಲಾಹ್ ನ) ಸಂರಕ್ಷಣೆ ಇಲ್ಲದ ಯಾವೊಂದು ಜೀವಿಯೂ ಇಲ್ಲ. [1-4]

ತನ್ನನ್ನು ಯಾವ ಮೂಲದಿಂದ ಸೃಷ್ಟಿಸಲಾಗಿದೆ ಎಂಬುದನ್ನು ಮನುಷ್ಯನೊಮ್ಮೆ ಅವಲೋಕಿಸಿಕೊಳ್ಳಲಿ. ಬೆನ್ನು ಮತ್ತು ಪಕ್ಕೆಲುಬುಗಳ ಮಧ್ಯೆ ಉತ್ಪತ್ತಿಯಾಗಿ ಹೊರಚಿಮ್ಮುವ ದ್ರವದಿಂದ ಅವನ ಸೃಷ್ಟಿಕಾರ್ಯವು ನಡೆದಿದೆ. (ಹಾಗಿರುವಾಗ, ಮರಣಾನಂತರ) ಅವನನ್ನು ಪುನಃ ಜೀವಂತಗೊಳಿಸುವಲ್ಲಿ ಅಲ್ಲಾಹ್ ನು ಸರ್ವಶಕ್ತನಾಗಿದ್ದಾನೆ ಎಂಬುದರಲ್ಲಿ ಸಂದೇಹ ಬೇಡ. (ಪುನರುತ್ಥಾನದ) ಆ ದಿನ (ಮನುಷ್ಯನು ತನ್ನ ಅಂತರಾಳದಲ್ಲಿ ಅಡಗಿಸಿಟ್ಟ) ರಹಸ್ಯಗಳನ್ನೂ (ಹೊರಗೆಡಹಿ) ವಿಚಾರಣೆ ನಡೆಸಲಾಗುವುದು. ಅಂದು ಅವನು ಬಲಹೀನನೂ ನಿಸ್ಸಹಾಯಕನೂ ಆಗಿರುವನು. [5-10]

ಮಳೆಯನ್ನು ಸುರಿಸುವ, ಅದನ್ನು ಪದೇ ಪದೇ ಮರುಕಳಿಸುವಂತೆ ಮಾಡುವ ಅಕಾಶವು ಸಾಕ್ಷಿ! (ಸಸ್ಯಾದಿಗಳು ಮೊಳಕೆಯೊಡೆದು ಹೊರಬರಲು ಅನುವಾಗುವ ರೀತಿಯಲ್ಲಿ) ಸೀಳಿಕೊಳ್ಳುವ ಭೂಮಿಯು ಸಾಕ್ಷಿ! (ಈ ಕುರ್‍ಆನ್) ಲಘುವಾಗಿ ತೆಗೆದುಕೊಳ್ಳುವಂತಹ ವಿನೋದದ ಮಾತಲ್ಲ; ಬದಲಾಗಿ ಇದೊಂದು ನಿರ್ಣಾಯಕವಾದ ವಚನ ಎಂಬುದರಲ್ಲಿ ಸಂದೇಹವಿಲ್ಲ. [11-14]

(ಸತ್ಯವನ್ನು ಧಿಕ್ಕರಿಸುವ ಮಕ್ಕಃ ಪಟ್ಟಣ ವಾಸಿಗಳಾದ) ಆ ಜನರು ಕುತಂತ್ರಗಳನ್ನು ಹೂಡುತ್ತಲೇ ಇದ್ದಾರೆ; ಮತ್ತು ನಾನೂ (ಅವರ ವಿರುದ್ಧ) ಉಪಾಯದ ಜಾಲವನ್ನು ಹರಡಿದ್ದೇನೆ. ಆದ್ದರಿಂದ (ಓ ಪ್ರವಾದಿ ಮುಹಮ್ಮದ್,) ಸತ್ಯವನ್ನು ಧಿಕ್ಕರಿಸುತ್ತಿರುವ ಆ ‘ಕಾಫಿರ್’ ಗಳಿಗೆ ಸ್ವಲ್ಪ ಕಾಲಾವಕಾಶ ನೀಡಿ; ಅವರನ್ನು ಒಂದಲ್ಪ ಸಮಯ ಅವರ ಪಾಲಿಗೆ ಬಿಟ್ಟು ಬಿಡಿ! [15-17]

1 thoughts on “ಅತ್-ತ್ವಾರಿಕ್

ನಿಮ್ಮ ಟಿಪ್ಪಣಿ ಬರೆಯಿರಿ