ಅಲ್-ಮುತಫ್ಫಿಫೀನ್

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುತ್ತೇನೆ)!

(ಅಳತೆ ಮತ್ತು ತೂಕದಲ್ಲಿ) ಕಡಿತಗೊಳಿಸುವವರಿಗೆ [ವರ್ತಕ ಸಮುದಾಯಕ್ಕೆ] ವಿನಾಶ ಕಾದಿದೆ! ಅಂಥವರು ಜನರಿಂದ ಅಳೆದು ಪಡೆಯುವಾಗ ಪೂರ್ತಿಯಾಗಿ ಪಡೆಯುತ್ತಾರೆ. ಆದರೆ ಅಳೆದು ಅಥವಾ ತೂಕ ಮಾಡಿ ಕೊಡುವಾಗ ಅವರು ಜನರಿಗೆ ನಷ್ಟವುಂಟುಮಾಡುತ್ತಾರೆ. (ಪುನರುತ್ಥಾನದ) ಆ ಪ್ರಚಂಡ ದಿನ ಅವರನ್ನು (ವಿಚಾರಣೆಯ ಸಲುವಾಗಿ) ಪುನಃ ಜೀವಂತಗೊಳಿಸಲಾಗುವುದು ಎಂದು ಅವರೇಕೆ ಯೋಚಿಸುವುದಿಲ್ಲ? ಅಂದು ಮಾನವರೆಲ್ಲರೂ ಸಕಲ ವಿಶ್ವದ ಒಡಯನ/ಪಾಲಕನ ಸನ್ನಿಧಿಯಲ್ಲಿ ನಿಲ್ಲಬೇಕಾಗುವುದು. [1-6]

ಹಾಗಲ್ಲ! ದುಷ್ಕರ್ಮಿಗಳ ಕರ್ಮಗಳ ದಾಖಲಾತಿಯು ‘ಸಿಜ್ಜೀನ್’ ನಲ್ಲಿದೆ. ‘ಸಿಜ್ಜೀನ್’ ಎಂದರೆ ಏನೆಂದು ನಿಮಗೆ ತಿಳಿದಿದೆಯೇ? ಅದೊಂದು ಬರೆದಿಡಲ್ಪಟ್ಟ ದಾಖಲೆಯಾಗಿದೆ. (ವಿಚಾರಣೆಯ ದಿನವನ್ನು) ಸುಳ್ಳೆಂದು ಧಿಕ್ಕರಿಸಿದವರಿಗೆ ವಿನಾಶ ಕಾದಿದೆ. ಅವರು ಪ್ರತಿಫಲದ ದಿನವನ್ನು ನಿರಾಕರಿಸುತ್ತಾರೆ. ದುಷ್ಕೃತ್ಯದ ಎಲ್ಲ ಮೇರೆಗಳನ್ನು ಮೀರಿದ ಪಾಪಿಯಲ್ಲದೆ ಬೇರಾರೂ ಪ್ರತಿಫಲದ ದಿನವನ್ನು ನಿರಾಕರಿಸುವುದಿಲ್ಲ. ನಮ್ಮ (ಕುರ್‍ಆನ್ ನ) ‘ಆಯತ್’ ಗಳನ್ನು ಅವನ ಮುಂದೆ ಓದಿ ಕೇಳಿಸಿದಾಗ ಇವೆಲ್ಲಾ ಮುಂಚಿನವರ ಪುರಾಣ ಕಥೆಗಳು ಎಂದು ಬಿಡುವನು. ಹಾಗಲ್ಲ! ವಾಸ್ತವದಲ್ಲಿ ಅವರ (ನಿರಂತರ) ದುಷ್ಕೃತ್ಯಗಳ ಫಲವಾಗಿ ಅವರ ಹೃದಯಗಳಿಗೆ ತುಕ್ಕು ಹಿಡಿದು ಹೋಗಿದೆ. ಖಂಡಿತವಾಗಿ, ಆ ದಿನ ಅವರನ್ನು ಅವರ ಪ್ರಭುವಿನ ದರ್ಷನ ಪಡೆಯದಂತೆ ತಡೆಯಲಾಗುವುದು. ತರುವಾಯ ಅವರು ಹೊತ್ತಿ ಉರಿಯುವ ನರಕಾಗ್ನಿಯನ್ನು ಸೇರುವರು. ಆಗ, ನೀವು (ಭೂಲೋಕದಲ್ಲಿರುವಾಗ) ನಿರಾಕರಿಸುತ್ತಿದ್ದ ನರಕವು ಇದುವೇ ಆಗಿದೆ ಎಂದು ಅವರನ್ನು (ಹಂಗಿಸಿ) ಹೇಳಲಾಗುವುದು. [7-17]

ಸಂಶಯವಿಲ್ಲ! ಸಜ್ಜನರ ಸತ್ಕರ್ಮಗಳ ದಾಖಲಾತಿಯು ‘ಇಲ್ಲಿಯ್ಯೀನ್’ ನಲ್ಲಿದೆ. ‘ಇಲ್ಲಿಯ್ಯೀನ್’ ಎಂದರೆ ಏನೆಂದು ನಿಮಗೆ ಗೊತ್ತೇ? ಅದೊಂದು ಬರೆದಿಡಲ್ಪಟ್ಟ ದಾಖಲೆಯಾಗಿದೆ. ಅಲ್ಲಾಹ್ ನ ಸಾಮೀಪ್ಯ ಪಡೆದಿರುವ (ಮಲಕ್ ಗಳು) ಅದನ್ನು ನೋಡಿಕೊಳ್ಳುತ್ತಿರುವರು. ಇನ್ನು ಸಜ್ಜನರು ‘ನಈಮ್’ (ಅರ್ಥಾತ್: ಸುಖಸೌಭಾಗ್ಯಗಳು ತುಂಬಿರುವ ಸ್ವರ್ಗೋದ್ಯಾನ) ನಲ್ಲಿ ಇರುವರು. ಉನ್ನತ ಆಸನಗಳಲ್ಲಿ ಕುಳಿತುಕೊಂಡು ಎಲ್ಲವನ್ನೂ ನೋಡುತ್ತಿರುವರು. ಅವರ ಮುಖಗಳಲ್ಲಿನ ಸುಖಸೌಭಾಗ್ಯದ ಕಾಂತಿಯನ್ನು ನೀವು ಗುರುತಿಸಿ ಕೊಳ್ಳುವಿರಿ. ಮುಚ್ಚಿ ಮುದ್ರೆ ಹಾಕಿ ಇರಿಸಿದ ಶುದ್ಧ ಮದಿರೆಯನ್ನು ಅವರಿಗೆ ಕುಡಿಸಲಾಗುವುದು. ಅದನ್ನು ಕಸ್ತೂರಿಯ (ಸುಗಂಧದಿಂದ) ಮುಚ್ಚಿಡಲಾಗಿರುವುದು. ಇನ್ನು ಸ್ಪರ್ಧಿಸಲು ಬಯಸುವವರು ಅದನ್ನು ತನ್ನದಾಗಿಸಿಕೊಳ್ಳಲು ಸ್ಪರ್ಧಿಸಲಿ! ಅದರಲ್ಲಿ (ಸ್ವರ್ಗೋದ್ಯಾನದ ಒಂದು) ಚಿಲುಮೆಯಾದ ‘ತಸ್ನೀಮ್’ ನ ಮಿಶ್ರಣವಿರಿವುದು. ಅದನ್ನು (ಅಲ್ಲಾಹ್ ನ) ಸಾಮೀಪ್ಯ ಪಡೆದ (ಸ್ವರ್ಗವಾಸಿಗಳು) ಸೇವಿಸುವರು! [18-28]

(ಐಹಿಕ ಜೀವನದಲ್ಲಿ) ಅಪರಾಧಗಳನ್ನೆಸಗುತ್ತಿದ್ದ ಪಾಪಿಗಳು (ಅಲ್ಲಾಹ್ ಮತ್ತು ಪುನರುತ್ಥಾನ ದಿನದಲ್ಲಿ ವಿಶ್ವಾಸವಿರಿಸಿದ್ದ) ‘ಮೂಮಿನ್’ ಗಳನ್ನು ಗೇಲಿ ಮಾಡಿ ನಗುತ್ತಿದ್ದರು. ಅಂಥವರು ‘ಮೂಮಿನ್’ ಗಳ ಬಳಿಯಿಂದ ಹಾದು ಹೋಗುವಾಗ (ಲೇವಡಿ ಮಾಡುವ ಸಲುವಾಗಿ) ಪರಸ್ಪರ ಕಣ್ಣು ಮಿಟುಕಿಸುತ್ತಿದ್ದರು; ಮತ್ತು ತಮ್ಮ ಮನೆಯವರ ಕಡೆಗೆ ಮರಳುವಾಗ ಸಂಭ್ರಮಿಸುತ್ತಾ ಮರಳುತ್ತಿದ್ದರು. ‘ಮೂಮಿನ್’ ಗಳನ್ನು ನೋಡಿದಾಗಲೆಲ್ಲ ಈ ಜನರು ನಿಜವಾಗಿಯೂ ದಾರಿ ತಪ್ಪಿದವರು ಎನ್ನುತ್ತಿದ್ದರು. ಆದರೆ ಅವರನ್ನು ‘ಮೂಮಿನ್’ ಗಳ ಉಸ್ತುವಾರಿ ಕಾರ್ಯಕ್ಕಾಗಿ ಕಳಿಸಲಾಗಿರಲಿಲ್ಲ! [29-33]

ಆದರೆ ಇಂದು (ಅಲ್ಲಾಹ್ ಮತ್ತು ಪುನರುತ್ಥಾನ ದಿನದಲ್ಲಿ ಧೃಡ ವಿಶ್ವಾಸ ಹೊಂದಿದ್ದ) ‘ಮೂಮಿನ್’ ಗಳು (ಅದನ್ನು ನಿರಾಕರಿಸಿದ) ‘ಕಾಫಿರ್’ ಗಳನ್ನು ನೋಡಿ ನಗುವರು. ಅವರು ಉನ್ನತ ಪೀಠಗಳಲ್ಲಿ ಆಸೀನರಾಗಿ (‘ಕಾಫಿರ್’ ಗಳ ದುರವಸ್ಥೆಯನ್ನು) ನೋಡುತ್ತಿರುವರು. (ಮೂಮಿನ್ ಗಳನ್ನು ಮೂದಲಿಸುತ್ತಿದ್ದ) ‘ಕಾಫಿರ್’ ಗಳ ವರ್ತನೆಗೆ ಅತ್ಯಂತ ಯೋಗ್ಯ ಪ್ರತಿಫಲವು ಸಿಕ್ಕಿಯೇ ಬಿಟ್ಟಿತಲ್ಲ! [34-36]

1 thoughts on “ಅಲ್-ಮುತಫ್ಫಿಫೀನ್

ನಿಮ್ಮ ಟಿಪ್ಪಣಿ ಬರೆಯಿರಿ