ಅನ್-ನಾಝಿ’ಆತ್

079 | ಸೂರಃ ಅನ್-ನಾಝಿಆತ್ | ಆಯತ್ ಗಳು 46
079 | ಸೂರಃ ಅನ್-ನಾಝಿಆತ್ | ಆಯತ್ ಗಳು 46

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುತ್ತೇನೆ)!

(ಮರಣದ ವೇಳೆ ದುರ್ಜನರ ಆತ್ಮವನ್ನು) ಮುಳುಗಿ ಹಿಡಿದೆಳೆಯುವ; (ಸಜ್ಜನರ ಆತ್ಮವನ್ನು) ಮೃದುವಾಗಿ ಬಿಡಿಸಿ ತರುವ; ಮತ್ತು (ಆಕಾಶಗಳಲ್ಲಿ ಶೀಘ್ರಗತಿಯಲ್ಲಿ) ತೇಲಾಡುತ್ತಿರುವ (ಮಲಕ್ ಗಳು) ಸಾಕ್ಷಿಯಾಗಿವೆ! (ಅಲ್ಲಾಹನ ಆಜ್ಞಾಪಾಲನೆಯ ಕಾರ್ಯದಲ್ಲಿ ಅಂತಹ ಮಲಕ್ ಗಳು) ಪರಸ್ಪರ ಸ್ಪರ್ಧೆಯಲ್ಲಿ ತೊಡಗಿರುವರು. ಮತ್ತು ಆಜ್ಞಾನುಸಾರ (ತಮ್ಮ ಪಾಲಿನ) ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವರು. [1-5]

(ಲೋಕಾಂತ್ಯಗೊಳ್ಳುವ) ಆ ದಿನ (ಭೂಮಿಯು) ಭಯಂಕರವಾಗಿ ಕಂಪಿಸುವುದು. ಅದರ ಬೆನ್ನಿಗೇ ಮತ್ತೊಂದು ಭಯಾನಕ ಕಂಪನವಾಗುವುದು. ಕೆಲವು ಹೃದಯಗಳು ಅಂದು ಭೀತಿಯಿಂದ ನಡುಗುವುದು, ದೃಷ್ಟಿಗಳು (ಭಯಭೀತವಾಗಿ) ಕೆಳಗಾಗಿರುವುದು. [6-9]

(ಸಾವು ಸನ್ನಿಹಿತವಾದ ಆ ಸಂದರ್ಭದಲ್ಲಿ) ಅವರು ಕೇಳತೊಡಗುವರು: (ಒಮ್ಮೆ ಸತ್ತು ಮಣ್ಣಾದ ನಂತರ) ನಮ್ಮನ್ನು ಪುನಃ ಹಿಂದಿನ ಸ್ಥಿತಿಗೆ ಮರಳಿಸಲಾಗುವುದೇ? ನಾವು ಟೊಳ್ಳಾದ, ಕೆಲಸಕ್ಕೆ ಬಾರದ ಮೂಳೆಗಳಾಗಿ ಬಿಟ್ಟ ನಂತರವೂ (ಹಾಗೆ ಮಾಡುವುದು ಸಾಧ್ಯವೇ)? ಪುನಃ ಹೇಳುವರು: ಹಾಗೆ (ನಮ್ಮನ್ನು ಜೀವಂತಗೊಳಿಸಿ ಹಿಂದಿನ ಸ್ಥಿತಿಗೆ) ಮರಳಿಸಲಾದರೆ ಅದೊಂದು ನಷ್ಟದಾಯಕ ವ್ಯವಹಾರವೇ ಸರಿ! ನಿಜವಾಗಿಯೂ ಅದು ಒಮ್ಮಿಂದಮ್ಮೆಲೇ ಸಂಭವಿಸಿ ಬಿಡುವ ಒಂದು ಘನಘೋರ ಘರ್ಜನೆ, ಆ ಕೂಡಲೇ ಅವರೆಲ್ಲರೂ ಒಂದು ಮೈದಾನದಲ್ಲಿರುವರು! [10-14]

(ಪ್ರವಾದಿ) ಮೂಸಾ ರವರ ವೃತ್ತಾಂತವು ನಿಮಗೆ ತಲುಪಿದೆಯಲ್ಲವೇ? ಪವಿತ್ರವಾದ ‘ತುವಾ’ ಕಣಿವೆಯಲ್ಲಿ ಅವರನ್ನು ಅವರ ಒಡೆಯನು ಕರೆದ ಆ ಸಂದರ್ಭವನ್ನು ನೆನಪಿಸಿಕೊಳ್ಳಿ! (ಅಲ್ಲಿ ಮೂಸಾ ರಿಗೆ ಆಜ್ಞಾಪಿಸಲಾಯಿತು:) ನೀವಿನ್ನು ‘ಫಿರ್‍ಔನ್’ ನ ಬಳಿಗೆ ಹೋಗಬೇಕು, ಅವನು ಆಜ್ಞೋಲ್ಲಂಘನೆಯ ಹಾದಿ ಹಿಡಿದಿದ್ದಾನೆ. ಮತ್ತು ಹೇಳಬೇಕು: ನಿನಗೆ ಸ್ವತಃ ತನ್ನನ್ನು ತಿದ್ದಿಕೊಂಡು ಸುಧಾರಣೆಯ ಹಾದಿ ಹಿಡಿಯುವ ಮನಸ್ಸಿದೆಯೇ? ನಾನು ನಿನಗೆ ನಿನ್ನ ಒಡೆಯನ ಕಡೆಗಿರುವ ಹಾದಿಯನ್ನು ತೋರಿಸಿ ಕೊಡಲೇ? ಹಾಗಾದರೆ (ನಿನ್ನಲ್ಲಿ ಅವನ) ಭಯ ಉಂಟಾದೀತೇ? [15-19]

ಪ್ರವಾದಿ ಮೂಸಾರವರು ‘ಫಿರ್‍ಔನ್’ ನಿಗೆ ಅದ್ಭುತ/ಅಸಾಧಾರಾಣ ಪವಾಡಗಳನ್ನು ತೋರಿಸಿದರು. ಆದರೆ ಅವನು ಅವುಗಳನ್ನು ಧಿಕ್ಕಾರದೊಂದಿಗೆ ತಿರಸ್ಕರಿಸಿದನು. ಮಾತ್ರವಲ್ಲ ಅವನು (ತಿರಸ್ಕಾರದೊಂದಿಗೆ) ಬೆನ್ನುತಿರುಗಿಸಿ ಓಡಿ ಹೋದನು. (ತನ್ನ ಸಮುದಾಯದ ಜನರನ್ನು) ಒಟ್ಟುಗೂಡಿಸಿದನು ಮತ್ತು ಅವರಿಗೆ ಸಾರಿದನು; ನಾನೇ ನಿಮ್ಮೆಲ್ಲರ ಶ್ರೇಷ್ಠ ಪರಿಪಾಲಕನೂ ರಕ್ಷಕನೂ ಆಗಿದ್ದೇನೆ – ಎಂದು ಘೋಷಿಸಿದನು. ಪರಿಣಾಮವಾಗಿ ಅಲ್ಲಾಹನು ಅವನನ್ನು ಪರಲೋಕದಲ್ಲಿಯೂ ಇಹಲೋಕದಲ್ಲಿಯೂ ಶಿಕ್ಷಿಸುವ ಸಲುವಾಗಿ ಹಿಡಿದುಬಿಟ್ಟನು. ಖಂಡಿತವಾಗಿಯೂ ಈ ವೃತ್ತಾಂತದಲ್ಲಿ ಅಲ್ಲಾಹನ ಭಯವಿರುವವರಿಗೆ ಪಾಠವಿದೆ. [20-26]

(ಇನ್ನು ಸೃಷ್ಟಿಜಾಲವನ್ನು ಪರಿಶೀಲಿಸುವುದಾದರೆ) ಪ್ರಬಲವೂ ಪ್ರಚಂಡವೂ ಆದ ಸೃಷ್ಟಿಯು (ಮನುಷ್ಯರಾದ) ನೀವೋ ಅಥವಾ (ನಿಮ್ಮ ಮೇಲಿರುವ) ಅಕಾಶವೋ? ಅಲ್ಲಾಹನು ಆಕಾಶವನ್ನು ನಿರ್ಮಿಸಿರುವನು! ಅದರ ಮೇಲ್ಛಾವಣಿಯನ್ನು ಎತ್ತರಕ್ಕೆ ಏರಿಸಿ, ಅದನ್ನು ಸಕಲ ರೀತಿಯಲ್ಲಿ ಸರಿಪಡಿಸಿರುವನು. ಅದರ ರಾತ್ರಿಯನ್ನು (ಕತ್ತಲೆಯಲ್ಲಿ) ಮರೆಗೊಳಿಸಿದನು; ಮತ್ತು ಹಗಲನ್ನು ಅದರಿಂದ ಹೊರಹೊಮ್ಮಿಸಿದನು. ಅದಾದ ನಂತರ ಭೂಮಿಯನ್ನು ಸವಿಸ್ತಾರಗೊಳಿಸಿದನು. ಅದರೊಳಗಿಂದ ನೀರನ್ನೂ ಹುಲ್ಲನ್ನೂ ಹೊರತೆಗೆದನು. ಅದರಲ್ಲಿ ಬೃಹತ್ ಪರ್ವತಗಳನ್ನು ಭದ್ರವಾಗಿ ನೆಟ್ಟನು. ಇವೆಲ್ಲಾ ನಿಮಗೂ ನಿಮ್ಮ ಜಾನುವಾರುಗಳಿಗೂ ಜೀವನ ಸಾಗಿಸಲು ಬೇಕಾದ ಸಾಧನವನ್ನು ಒದಗಿಸಲಿಕ್ಕಾಗಿಯೇ (ಆಗಿದೆ). [27-33]

ಮುಂದೆ, ಆ ಭಯಾನಕ ವಿಪತ್ತು (ಅರ್ಥಾತ್: ಪುನರುತ್ಥಾನ ದಿನ) ಬಂದೆರಗಿದಾಗ, ಮನುಷ್ಯನು (ಭೂಮಿಯಲ್ಲಿ) ತಾನೆಸಗಿದ ಕೃತ್ಯಗಳನ್ನು ಸ್ಮರಿಸಿಕೊಳ್ಳುವನು. ಅಂದು (ಧಗಧಗಿಸಿ ಉರಿಯುವ) ನರಕಾಗ್ನಿಯನ್ನು ಪ್ರತಿಯೊಬ್ಬ ನೋಡುವವನ ಮುಂದೆ ಪ್ರತ್ಯಕ್ಷಗೊಳಿಸಲಾಗುವುದು. ಯಾರು (ಅಲ್ಲಾಹನ) ಆಜ್ಞೆಗಳನ್ನು ಉಲ್ಲಂಘಿಸಿದ್ದನೋ ಮತ್ತು (ಪರಲೋಕಕ್ಕಿಂತ) ಇಹಲೋಕ ಜೀವನಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದನೋ ನರಕಾಗ್ನಿಯೇ ಅಂಥವನ ಅಂತಿಮ ತಾಣವಾಗಿರುವುದು. ಯಾರು ತನ್ನ (ನೈಜ) ಒಡೆಯನ ಮುಂದೆ (ಲೆಕ್ಕ ಸಮರ್ಪಣೆಗಾಗಿ) ನಿಲ್ಲಬೇಕಾದ ಅವಸ್ಥೆಯ ಕುರಿತು ಅಂಜಿಕೊಂಡಿದ್ದನೋ; ಮತ್ತು ಸ್ವೇಚ್ಛಾಚಾರದಿಂದ ತನ್ನನ್ನು ತಡೆದುಕೊಂಡಿದ್ದನೋ – ಅಂಥವನಿಗೆ ಸ್ವರ್ಗೋದ್ಯಾನವಿದೆ ಮತ್ತು ಅದುವೇ ಅವನ ಶಾಶ್ವತ ನಿವಾಸವಾಗಿರುವುದು. [34-41]

(ಲೋಕಾಂತ್ಯಗೊಳ್ಳುವ) ಆ ಘಳಿಗೆಯು ಯಾವಾಗ ಬಂದುಬಿಡುತ್ತದೆ? ಎಂದು (ಓ ಮುಹಮ್ಮದ್) ಅವರು ನಿಮ್ಮೊಡನೆ ಕೇಳುತ್ತಿದ್ದಾರೆ. ಅದು (ಯಾವಾಗ ಬಂದುಬಿಡುತ್ತದೆ ಎಂದು) ನಿಮಗೇನು ಗೊತ್ತು? ಅದರ ಬಗೆಗಿನ ಪರಮ ಜ್ಞಾನವು ನಿಮ್ಮ ಪ್ರಭುವಿನ ಬಳಿ ಮಾತ್ರ ಇದೆ. ನೀವಾದರೋ ಆ ದಿನದ ಕುರಿತು ಭಯಪಡುವವರನ್ನು ಎಚ್ಚರಿಸಿ ಬಿಡುವವರು ಮಾತ್ರ! ಇನ್ನು (ಆ ದಿನವನ್ನು ಅವರು ಕಣ್ಣಾರೆ ಕಂಡುಕೊಂಡಾಗ ನಾವು (ಭೂಮಿಯಲ್ಲಿ) ಬದುಕಿದ್ದುದು ಕೇವಲ ಒಂದು ಸಂಜೆ ಅಥವಾ ಒಂದು ಮುಂಜಾನೆ ಮಾತ್ರ ಎಂದು ಅವರಿಗೆ ಭಾಸವಗುವುದು. [42-46]

2 thoughts on “ಅನ್-ನಾಝಿ’ಆತ್

ನಿಮ್ಮ ಟಿಪ್ಪಣಿ ಬರೆಯಿರಿ